Index   ವಚನ - 395    Search  
 
ಅನಂತಕೋಟಿ ಆದಿಬ್ರಹ್ಮರ ಶಿರವನರಿದು ಬ್ರಹ್ಮಕಪಾಲವ ಪಿಡಿದಾಡದಂದು, ಅನಂತಕೋಟಿ ಆದಿನಾರಾಯಣರ ನಿಟ್ಟೆಲುವ ಮುರಿದು ಕಂಕಾಳದಂಡವ ಧರಿಸದಂದು, ಅನಂತಕೋಟಿ ಆದಿಕಾಲರ ಒದ್ದೊದ್ದು ಕೊಲ್ಲದಂದು, ಅನಂತಕೋಟಿ ಆದಿ ಮನ್ಮಥರ ದಹಿಸಿ ಭಸ್ಮವ ಮಾಡದಂದು, ಅನಂತಕೋಟಿ ತ್ರಿಪುರಂಗಳ ಸಂಹಾರವ ಮಾಡದಂದು, ಪರಶಿವಲೀಲೆಯಿಂದ ಅನಂತಕೋಟಿ ಬ್ರಹ್ಮಾಂಡಂಗಳ ಸೃಜಿಸದಂದು, ಅನಾದಿ ಅಕಾರ, ಅನಾದಿ ಉಕಾರ, ಅನಾದಿ ಮಕಾರವೆಂಬ ಪ್ರಣವತ್ರಯವಾಗಿದ್ದನು ನೋಡಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.