Index   ವಚನ - 456    Search  
 
ಆ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ತಾರಕಸ್ವರೂಪದಲ್ಲಿ ಸದ್ಯೋಜಾತಮುಖ ಉತ್ಪತ್ಯವಾಯಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ವಾಮದೇವಮುಖ ಉತ್ಪತ್ಯವಾಯಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ಅಘೋರಮುಖ ಉತ್ಪತ್ಯವಾಯಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ತತ್ಪುರುಷಮುಖ ಉತ್ಪತ್ಯವಾಯಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಈಶಾನಮುಖ ಉತ್ಪತ್ಯವಾಯಿತ್ತು. ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ನಿರ್ಭಾವಮುಖ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಈಶ್ವರೋsವಾಚ-ಶಿವಧರ್ಮಸೂತ್ರೇ: ಓಂಕಾರತಾರಕಸ್ವರೂಪೇ ಸದ್ಯೋಜಾತಂ ಚ ಜಾಯತೇ | ಓಂಕಾರದಂಡ ಸ್ವರೂಪೇ ವಾಮದೇವಂ ಚ ಜಾಯತೇ || ಓಂಕಾರಕುಂಡಲಾಕಾರೇ ಅಘೋರಂ ಚಾಪಿ ಜಾಯತೇ | ಓಂಕಾರ ಅರ್ಧಚಂದ್ರೇ ಚ ತತ್ಪುರುಷಂ ಚ ಜಾಯತೇ || ಓಂಕಾರದರ್ಪಣಾಕಾರೇ ಈಶಾನ್ಯಂ ಚ ಸ ಜಾಯತೇ || ಓಂಕಾರ ಜ್ಯೋತಿರೂಪೇ ಚ ನಿರ್ಭಾವಃ ತತ್ರ ಜಾಯತೇ || ಇತಿ ಷಟ್‌ಮುಖಂ ದೇವಿ ಸ್ಥಾನಸ್ಥಾನೇಷು ಜಾಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.