ಅಲ್ಲಿಂದ ಮೇಲೆ ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ,
ಆಕಾಶವೆಂಬ ಮಹಾಭೂತ,
ಆ ಚಕ್ರ ವರ್ತುಳಾಕಾರ, ಷೋಡಶದಳ ಪದ್ಮ, ಆ ಪದ್ಮ ಶ್ವೇತವರ್ಣ.
ಅಲ್ಲಿಅಕ್ಷರ ಅ ಆ ಇ ಈ ಉ ಊ ಋ ಋೂ ಲೃ ಲೄ
ಏ ಐ ಓ ಔ ಅಂ ಅಃ ಎಂಬ ಷೋಡಶಾಕ್ಷರ ನ್ಯಾಸವಾಗಿಹುದು.
ಈಶಾನ್ಯಮುಖವನುಳ್ಳ ಪ್ರಸಾದಲಿಂಗ.
ಆ ಲಿಂಗಕ್ಕೆ ಶಾಂತ್ಯತೀತೆಯೆಂಬ ಕಲೆ,
ಅಲ್ಲಿ ಶಿವಸಾದಾಖ್ಯ, ಅಲ್ಲಿಯ ದಿಕ್ಕು ಊರ್ಧ್ವದಿಕ್ಕು,
ಅಲ್ಲಿಯ ನಾದ ಮೇಘಧ್ವನಿ,
ಡಾಕಿನಿಯೆಂಬ ಪರಿಯಾಯ ನಾಮವನುಳ್ಳ ಪರಾಶಕ್ತಿ
ಲಿಂಗದ ಶ್ರೋತ್ರವೆಂಬಮುಖದಲ್ಲಿ ಸುಜ್ಞಾನವೆಂಬ ಹಸ್ತದಿಂದ
ಆನಂದಭಕ್ತಿಯಿಂದ ಶಬ್ದದ್ರವ್ಯವನು
ಗಾಯತ್ರಿಯನುಚ್ಚರಿಸುತ್ತ ಅರ್ಪಿಸುವಳು.
ಸದಾಶಿವ ಪೂಜಾರಿ, ಪರವೆಂಬ ಸಂಜ್ಞೆ.
ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ಯಕಾರವೆಂಬ ಬೀಜಾಕ್ಷರ.
ಅದು ಪ್ರಣಮದ ದರ್ಪಣಾಕಾರದಲ್ಲಿಹ ಯಕಾರದಲ್ಲಿಹುದಾಗಿ
ಅಲ್ಲಿ ಆ ಈ ಊ ಏ ಓ ಯಾಂ
ಎಂಬ ಬ್ರಹ್ಮನಾದ ಮಂತ್ರಮೂರ್ತಿಪ್ರಣವದ
ಶಿರೋಮಧ್ಯದಲ್ಲಿಹ ಗುಹ್ಯನಾದಮಂತ್ರಮೂರ್ತಿಪ್ರಣವಕ್ಕೆ
ನಮಸ್ಕಾರವು ನೋಡಾ.
ಇದಕ್ಕೆ ಈಶ್ವರೋsವಾಚ:
ಕಂಠ ಪೀಠೇ ವಿಶುದ್ಧೇ ತು ಮಹಾಭೂತಸ್ಯಯೋನಭಃ |
ಗೋಳಕಾಕಾರಂ ಷೋಡಶದಳ ಪದ್ಮಂ ದ್ವಿರಷ್ಟಯೋ ||
ಆಕಾರಂ ಶ್ವೇತವರ್ಣಂತು ದೈವಂ ಸದಾಶಿವಂ ಸ್ಮೃತಂ |
ಬೀಜಾಕ್ಷರಂ ಯಕಾರಂ ಚ ಪ್ರಸಾದಲಿಂಗಯೋ ಸ್ಥಿತಂ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.