Index   ವಚನ - 790    Search  
 
ಎನ್ನ ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನವೆಂಬ ಭೂಮಿಯ ಮೇಲೆ ತಮ್ಮ ಕೃಪಾದೃಷ್ಟಿಯೆಂಬ ಗೋಮಯದಲ್ಲಿ ಸ್ವಯಂಪ್ರಕಾಶವೆಂಬ ಅಗ್ಘವಣಿಯಂ ನೀಡಿ, ಸಮ್ಮಾರ್ಜನೆಯಂ ಮಾಡಿ, ಎನ್ನ ಅಷ್ಟಮದಂಗಳ ಕುಟ್ಟಿ ರಂಗವಲ್ಲಿಯನಿಕ್ಕಿ, ನಮಃಶಿವಾಯವೆಂಬ ಬೀಜವಂ ಸುರಿದು, ನಿರಂಜನಪ್ರಣವ ಅವಾಚ್ಯಪ್ರಣವ ಕಲಾಪ್ರಣವ ಅನಾದಿಪ್ರಣವ ಆದಿಪ್ರಣವವೆಂಬ ಪಂಚಕಳಸಂಗಳಲ್ಲಿ ನಿರಂಜನಾತೀತವೆಂಬ ಉದಕವಂ ತುಂಬಿ, ಪಂಚಾಕ್ಷರವೆಂಬ ಬೀಜದ ಮೇಲೆ ಪಂಚಪ್ರಣವವೆಂಬ ಪಂಚಕಳಸಂಗಳಂ ಸ್ಥಾಪ್ಯವಂ ಮಾಡಿ, ಅರಿವೆಂಬ ದಾರವಂ ಸುತ್ತಿ, ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬ ನವರತ್ನವಂ ನೀಡಿ, ಮೂವತ್ತೆಂಟು ಕಲೆಗಳೆಂಬ ದರ್ಭೆಯಂ, ಅರುವತ್ತುನಾಲ್ಕು ಕಲೆ ಜ್ಞಾನಂಗಳೆಂಬ ತಳಿರುಗಳಂ ತುಂಬಿ, ನಿರಾಳವೆಂಬ ವಿಭೂತಿಯಂ ಧರಿಸಿ, ನಿರಂಜನವೆಂಬ ಗಂಧವನಿಟ್ಟು, ನಿರಾಮಯವೆಂಬ ಅಕ್ಷತೆಯಂ ಸಮರ್ಪಿಸಿ, ಪರಮಾನಂದವೆಂಬ ಮಧುರಸವನಿರಿಸಿ, ಅನಂತಕೋಟಿ ಸೂರ್ಯ ಚಂದ್ರಾಗ್ನಿ ಪ್ರಕಾಶವಾಗಿಹ ನಿರಾಲಂಬವೆಂಬ ಅಷ್ಟದಳಕಮಲ ಪುಷ್ಪವ ಸಮರ್ಪಿಸಿ, ಜ್ಞಾನವೆಂಬ ಧೂಪಮಂ ಬೀಸಿ, ಸ್ವಯಂಜ್ಯೋತಿಯೆಂಬ ಆರತಿಯಂ ಬೆಳಗಿ, ಅಖಂಡಿತವೆಂಬ ನೈವೇದ್ಯವಂ ಸಮರ್ಪಿಸಿ ಅಖಂಡಾನಂದವೆಂಬ ಅಡಕೆ, `ಏಕೇವ ನ ದ್ವಿತೀಯಂ ಬ್ರಹ್ಮ'ವೆಂಬ ಎಲೆ, ಸುರಾಳಬ್ರಹ್ಮವೆಂಬ ಸುಣ್ಣವಂ ತಂದು, ತಾಂಬೂಲವಂ ಸಮರ್ಪಿಸಿ, ಈ ಕ್ರಮದಲ್ಲಿ ಕಳಶಾಭಿಷೇಕವಂ ಮಾಡಿ, ಆ ಶಿಷ್ಯನ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆಂಬ ಗಣತಿಂತಿಣಿಗೆ ದೀರ್ಘದಂಡ ನಮಸ್ಕಾರವಂ ಮಾಡಿಸಿ ಚಿತ್ಪ್ರಕಾಶವೆಂಬ ವಿಭೂತಿಯ ಸರ್ವಾಂಗವೆಲ್ಲವ ಧೂಳನವಂ ಮಾಡಿ, ಶಿವಪ್ರಕಾಶವೆಂಬ ಯಜ್ಞೋಪವೀತವಂ ಧರಿಸಿ, ಅಪ್ರಮಾಣಕೂಡಲಸಂಗನೆಂಬ ಲಿಂಗಕ್ಕೆ ಪರಮಪರಿಣಾಮವೆಂಬ ಪಂಚಾಮೃತದಲ್ಲಿ ಅಭಿಷೇಕವಂ ಮಾಡಿಸಿ, ಪರಂಜ್ಞೋತಿಯೆಂಬ ವಿಭೂತಿಯನಿಟ್ಟು ನಿರಾಳಾತೀತವೆಂಬ ಗಂಧವ ಧರಿಸಿ, ಅನಾಮಯವೆಂಬ ಅಕ್ಷತೆಯನಿಟ್ಟು ಪರಾಪರಚಕ್ರದಲ್ಲಿಹ ಮಹಾಕ್ಷಿತಿ ದಳಪದ್ಮಮಂ ಸಮರ್ಪಿಸಿ, ಸಚ್ಚಿದಾನಂದವೆಂಬ ಧೂಪವಂ ಬೀಸಿ, ನಿತ್ಯಾನಂದವೆಂಬ ದೀಪವಂ ಬೆಳಗಿ, ಪರಾಪರವೆಂಬ ನೈವೇದ್ಯವನಿಟ್ಟು, ಅನುಭಾವವೆಂಬ ಅಡಕೆ, ಅಪ್ರಮೇಯವೆಂಬ ಎಲೆ, ಸ್ವಾನುಭೂತಿಯೆಂಬ ಸುಣ್ಣವಂ ತಂದು, ತಾಂಬೂಲವಂ ಸಮರ್ಪಿಸಿ, ಆ ಶಿಷ್ಯನ ಮೂವತ್ತೆರಡು ತತ್ವಸ್ಥಾನದಲ್ಲಿ ಮಹಾಪ್ರಕಾಶವೆಂಬ ವಿಭೂತಿಯಂ ಧರಿಸಿ, ನಿರಾಕಾರವೆಂಬ ಹಸ್ತವ ನಿರ್ವಯಲೆಂಬ ಪಂಚಾಮೃತದಲ್ಲಿ ಪ್ರಕ್ಷಾಲಿಸಿ, ಘನಕ್ಕೆ ಘನವಾಗಿಹ ಮಹಾಮಸ್ತಕದ ಮೇಲೆ ತಮ್ಮ ಪರಬ್ರಹ್ಮವೆಂಬ ಹಸ್ತಕಮಲವನಿರಿಸಿ, ಅನಂತತೇಜೋಮಯ ಅಪ್ರಮಾಣ ಅಗೋಚರಕ್ಕತ್ತತ್ತವಾಗಿಹ ಮಹಾಪ್ರಭಾಕಳೆಯಂ ತೆಗೆದು ಅಪ್ರಮಾಣಕೂಡಲಸಂಗಯ್ಯನೆಂಬ ಮಹಾಘನಲಿಂಗದ ಮೇಲಿರಿಸಿ, ಆ ಶಿಷ್ಯನ ನಿರಾಕಾರವೆಂಬ ಕರಸ್ಥಲದಲ್ಲಿ ಅಪ್ರಮಾಣಕೂಡಲಸಂಗಯ್ಯನೆಂಬ ಮಹಾಘನಲಿಂಗಮಂ ಬಿಜಯಂಗೆಯ್ಸಿ, ಪರಾಕಾಶವೆಂಬ ಕರ್ಣದ್ವಾರದಲ್ಲಿ ಅನಾದಿಮೂಲಮಂತ್ರಮಂ ತುಂಬಿ, `ಭಕ್ತಿ ಭಿಕ್ಷಾಂದೇಹಿ' ಎಂದು ಲಿಂಗಾರ್ಪಿತ ಭಿಕ್ಷಮಂ ಬೇಡಿಸಿ, ಈ ಕ್ರಮದಲ್ಲಿ ನಿರ್ವಾಣದೀಕ್ಷೆಯಂ ಕೊಟ್ಟು ಎನ್ನ ಕೃತಾರ್ಥನ ಮಾಡಿದ ಅಪ್ರಮಾಣ ಕೂಡಲಸಂಗಯ್ಯನ ಶ್ರೀಚರಣಕ್ಕೆ ನಮೋ ನಮೋ ಎನುತಿರ್ದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.