Index   ವಚನ - 791    Search  
 
ನಾಮರೂಪುಕ್ರಿಯಾತೀತವಾಗಿ ಘನಕ್ಕೆ ಘನವಾದ ಮಹಾಘನವೇ ಆ ಮುಕ್ತಾಂಗನೆಯ ಶಿರಸ್ಸು ನೋಡಾ. ದಿವ್ಯಜ್ಞಾನದ ಶಕ್ತಿ , ಮಹಾಜ್ಞಾನದ ಶಕ್ತಿ, ಅಖಂಡಜ್ಞಾನದ ಶಕ್ತಿಯೇ ಆ ಮುಕ್ತಾಂಗನೆಯ ನೇತ್ರತ್ರಯಂಗಳು ನೋಡಾ. ಅಚಲ ಅಚಲಾನಂದಶಕ್ತಿಯೇ ಆ ಮುಕ್ತಾಂಗನೆಯ ಪುರ್ಬುದ್ವಯಂಗಳು ನೋಡಾ. ಅಚಲಾತೀತದ ಮಹಾಶಕ್ತಿಯೇ ಆ ಮುಕ್ತಾಂಗನೆಯ ಹಣೆ ನೋಡಾ. ನಿರಾಳಾನಂದದ ಮಹಾಶಕ್ತಿಯೇ ಆ ಮುಕ್ತಾಂಗನೆಯ ನಾಸಿಕ ನೋಡಾ. ನಿರಂಜನಾತೀತದ ಶಕ್ತಿ, ನಿರಂಜನಾತೀತಾನಂದ ಶಕ್ತಿಯೇ ಆ ಮುಕ್ತಾಂಗನೆಯ ಉಶ್ವಾಸ ನಿಶ್ವಾಸ ನೋಡಾ. ನಿರಾಮಯದ ಶಕ್ತಿ, ನಿರಾಮಯಾತೀತದ ಶಕ್ತಿಯೇ ಆ ಮುಕ್ತಾಂಗನೆಯ ಕರ್ಣದ್ವಯಂಗಳು ನೋಡಾ. ನಿರಾಳನಿರ್ವಯಲಶಕ್ತಿಯೇ ಆ ಮುಕ್ತಾಂಗನೆಯ ನಯನದ್ವಯಂಗಳು ನೋಡಾ. ಅಮಲ ನಿರ್ಮಲದ ಶಕ್ತಿಯೇ ಆ ಮುಕ್ತಾಂಗನೆಯ ಕಪೋಲದ್ವಯಂಗಳು ನೋಡಾ. ಅಮಲಾತೀತದ ಶಕ್ತಿಯೇ ಆ ಮುಕ್ತಾಂಗನೆಯ ಗದ್ದ ನೋಡಾ. ನಾದದ ಶಕ್ತಿ ಬಿಂದುವಿನ ಶಕ್ತಿ ಕಲೆಯ ಶಕ್ತಿ ಕಲಾತೀತ ಶಕ್ತಿಯೆ ಆ ಮುಕ್ತಾಂಗನೆಯ ತಾಳೋಷ್ಠಸಂಪುಟ ನೋಡಾ. ಆ ಪ್ರಣವದ ನಾದದ ಕಲೆ, ಷೋಡಶಕಲೆ, ಪ್ರಣವಬಿಂದುವಿನ ಕಲೆ, ಈ ಮೂವತ್ತೆರಡು ಕಲಾಶಕ್ತಿಗಳೇ ಆ ಮುಕ್ತಾಂಗನೆಯ ಮೂವತ್ತೆರಡು ದಂತಗಳು ನೋಡಾ. ಆ ದಂತಂಗಳ ಕಾಂತಿ ಅನಂತಕೋಟಿ ಮಹಾಜ್ಯೋತಿಪ್ರಕಾಶವಾಗಿಹುದು ನೋಡಾ. ಆ ಮುಕ್ತಾಂಗನೆಯ ಕೊರಳೇ ಕುಳವಿಲ್ಲದ ನಿರಾಕುಳವಸ್ತುವಿನ ಮಹಾಶಕ್ತಿ ನೋಡಾ. ಅಪ್ರಮಾಣ ಅಗೋಚರಶಕ್ತಿಯೇ ಆ ಮುಕ್ತಾಂಗನೆಯ ಭುಜದ್ವಯಂಗಳು ನೋಡಾ. ಪರತತ್ವದಲ್ಲಿ ಶಿವತತ್ವದ ಮಹಾಶಕ್ತಿಯೇ ಆ ಮುಕ್ತಾಂಗನೆಯ ಕೂರ್ಪದ್ವಯಂಗಳು ನೋಡಾ. ಗುರತತ್ವದ ಲಿಂಗಶಕ್ತಿಯೇ ಆ ಮುಕ್ತಾಂಗನೆಯ ಹಸ್ತದ್ವಯಂಗಳು ನೋಡಾ. ಚಿತ್ಪಂಚಾಕ್ಷರ ಪರಮಪಂಚಾಕ್ಷರವೆ ಆ ಮುಕ್ತಾಂಗನೆಯ ಹಸ್ತದ್ವಯದ ಹಸ್ತಾಂಗುಲಿಗಳು ನೋಡಾ. ಚಿತ್ಪಂಚಾಕ್ಷರ ಪರಮಪಂಚಾಕ್ಷರದ ಮಹಾಪ್ರಭೆಯೆ ಆ ಮುಕ್ತಾಂಗನೆಯ ಹಸ್ತಾಂಗುಲಿಯ ನಖಂಗಳು ನೋಡಾ. ಪರಬ್ರಹ್ಮದ ಮಹಾಶಕ್ತಿಯೇ ಆ ಮುಕ್ತಾಂಗನೆಯ ಉರಸ್ಥಲ ನೋಡಾ. ಉನ್ಮನೀಶಕ್ತಿ ಮನೋನ್ಮನಿಶಕ್ತಿಯೇ ಆ ಮುಕ್ತಾಂಗನೆಯ ಕಕ್ಷದ್ವಯಂಗಳು ನೋಡಾ. ಆ ಪರಬ್ರಹ್ಮದ ಅಖಂಡ ಮಹಾಶಕ್ತಿಯೆಂಬ ಉರಸ್ಥಲದಲ್ಲಿ ನಿರಂಜನಪ್ರಣವ ಅವಾಚ್ಯಪ್ರಣವವೆಂಬ ಅಖಂಡಮಹಾ ಬಟ್ಟಕಲಶಕುಚಂಗಳು ನೋಡಾ. ಚಿತ್ತಾಕಾಶ ಚಿದಾಕಾಶಶಕ್ತಿಯೇ ಆ ಮುಕ್ತಾಂಗನೆಯ ದಕ್ಷಿಣ-ವಾಮಪಾರ್ಶ್ವಂಗಳು ನೋಡಾ. ಬಿಂದ್ವಾಕಾಶದ ಶಕ್ತಿಯೇ ಆ ಮುಕ್ತಾಂಗನೆಯ ಬೆನ್ನು ನೋಡಾ, ಮಹದಾಕಾಶ ಶಕ್ತಿಯೇ ಆ ಮುಕ್ತಾಂಗನೆಯ ಬೆನ್ನ ನಿಟ್ಟೆಲುವು ನೋಡಾ. ಪಂಚಸಂಜ್ಞೆಯನ್ನುಳ್ಳ ಅಖಂಡಲಿಂಗದ ಅಖಂಡಪರಾಕ್ರಮಶಕ್ತಿಯೇ ಆ ಮುಕ್ತಾಂಗನೆಯ ಗರ್ಭ ನೋಡಾ. ಆ ಗರ್ಭ ಅನಂತಕೋಟಿ ಮಹಾಜ್ಯೋತಿಪ್ರಕಾಶವಾಗಿಹುದು ನೋಡಾ. ಆ ಗರ್ಭದಲ್ಲಿ ಅನಂತಕೋಟಿ ಇಂದ್ರಾದಿಗಳು, ಅನೇಕಕೋಟಿ ಸರಸ್ವತಿಗಳು, ಅನೇಕಕೋಟಿ ಮಹಾಲಕ್ಷ್ಮಿಗಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ರುದ್ರಾಣಿಗಳು, ಅನೇಕಕೋಟಿ ಈಶ್ವರಶಕ್ತಿ, ಅನೇಕಕೋಟಿ ಉಮಾಶಕ್ತಿಗಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಕ್ರಿಯಾಶಕ್ತಿ, ಅನೇಕಕೋಟಿ ಜ್ಞಾನಶಕ್ತಿ, ಅನೇಕಕೋಟಿ ಆದಿಶಕ್ತಿಗಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಇಚ್ಛಾಶಕ್ತಿ , ಅನೇಕಕೋಟಿ ಪರಶಕ್ತಿ, ಅನೇಕಕೋಟಿ ಚಿಚ್ಛಕ್ತಿಗಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ನಿರ್ಮಾಯಶಕ್ತಿ, ಅನೇಕಕೋಟಿ ನಿಭ್ರಾಂತಶಕ್ತಿ, ಅನೇಕಕೋಟಿ ವಿಭಿನ್ನಶಕ್ತಿಗಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ತತ್ವಂಗಳು, ಅನೇಕಕೋಟಿ ಸದಾಶಿವರು, ಅನೇಕಕೋಟಿ ಮಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಈಶ್ವರರು, ಅನೇಕಕೋಟಿ ರುದ್ರರು, ಅನೇಕಕೋಟಿ ವಿಷ್ಣ್ವಾದಿಗಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಋಷಿಗಳು, ಅನೇಕಕೋಟಿ ಚಂದ್ರಾದಿತ್ಯರಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ದೇವರ್ಕಳು, ಅನೇಕಕೋಟಿ ಬ್ರಹ್ಮಾಂಡಗಳಡಗಿಹವು ನೋಡಾ. ವ್ಯೋಮಾತೀತದ ಮಹಾಶಕ್ತಿಯೇ ಆ ಮುಕ್ತಾಂಗನೆಯ ನಡು ನೋಡಾ. ಕಲಾಪ್ರಣವದ ಶಕ್ತಿಯೇ ಆ ಮುಕ್ತಾಂಗನೆಯ ಕಟಿಸ್ಥಾನಂಗಳು ನೋಡಾ. ಆದಿಪ್ರಣವದ, ಅನಾದಿಪ್ರಣವದ ಶಕ್ತಿಯೇ ಆ ಮುಕ್ತಾಂಗನೆಯ ಪಚ್ಚಳ ನೋಡಾ. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಮೊದಲಾದ ಸಮಸ್ತ ದೇವರ್ಕಗಳಿಗೂ ಜನನಸ್ಥಲವಾಗಿಹ ನಿರ್ವಾಣಪದದ ಮಹಾಶಕ್ತಿಯೇ ಆ ಮುಕ್ತಾಂಗನೆಯ ಉರಸ್ಥಲ ನೋಡಾ. ಶಿವಸಂಬಂಧ ಶಕ್ತಿಸಂಬಂಧವಾಗಿಹ ಓಂಕಾರಶಕ್ತಿಯೇ ಆ ಮುಕ್ತಾಂಗನೆಯ ಒಳತೊಡೆ ನೋಡಾ. ಸಚ್ಚಿದಾನಂದ ಪರಮಾನಂದದ ಶಕ್ತಿಯೇ ಆ ಮುಕ್ತಾಂಗನೆಯ ಮೊಳಪಾದ ಕಂಭದ್ವಯಂಗಳು ನೋಡಾ, ಚಿದಾನಂದದ ಮಹಾನಂದದ ಶಕ್ತಿಯೇ ಆ ಮುಕ್ತಾಂಗನೆಯ ಜಾನುದ್ವಯಂಗಳು ನೋಡಾ. ಚಿದಾತ್ಮ ಪರಮಾತ್ಮದ ಶಕ್ತಿಯೇ ಆ ಮುಕ್ತಾಂಗನೆಯ ಪಾದದ್ವಯಂಗಳು ನೋಡಾ. ಅತಿಸೂಕ್ಷ್ಮಪಂಚಾಕ್ಷರವೇ ಆ ಮುಕ್ತಾಂಗನೆಯ ಪದಾಂಗುಲಿಗಳೆಂಬ ಸಾಯುಜ್ಯಪದ ನೋಡಾ. ಅತಿಸೂಕ್ಷ್ಮ ಪಂಚಾಕ್ಷರ ಪ್ರಣವಪಂಚಾಕ್ಷರ ಮಹಾಪ್ರಕಾಶವೇ ಪಾದಾಂಗುಷ್ಠಾಂಗುಲಿಗಳ ನಖಂಗಳು ನೋಡಾ. ಪ್ರಣವಪಂಚಾಕ್ಷರ ಪರಾಪರವಾಗಿಹ ಪರಬ್ರಹ್ಮದ ಅತಿಮಹಾನಂದದ ಶಕ್ತಿಯೇ ಆ ಮುಕ್ತಾಂಗನೆಯ ಸ್ವರ ನೋಡಾ. ಆ ಮುಕ್ತಾಂಗನೆಯ ಮಾತೇ ಅಖಂಡಮಹಾಜ್ಯೋತಿರ್ಮಯ ಲಿಂಗ ನೋಡಾ. ಚಿನ್ಮಯ ಚಿದ್ರೂಪ ಚಿತ್ಪ್ರಕಾಶದ ಅಖಂಡಮಹಾಶಕ್ತಿಯೇ ಆ ಮುಕ್ತಾಂಗನೆಯ ಪೀತಾಂಬರದುಡುಗೆ ನೋಡಾ. ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ ಆಚಾರಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಮೊದಲಾಗಿ ಇನ್ನೂರ ಹದಿನಾರು ಷಡುಸ್ಥಲಲಿಂಗಂಗಳ ಅತಿಮಹಾಶಕ್ತಿಗಳೇ ಆ ಮುಕ್ತಾಂಗನೆಯ ತತ್ಸ್ಥಾನದಲ್ಲಿ ಧರಿಸಿಹ ಭೂಷಣಂಗಳು ನೋಡಾ. ಅಖಂಡಪರಿಪೂರ್ಣ ಜ್ಞಾನವೇ ಆ ಮುಕ್ತಾಂಗನೆಯ ತುರುಬು ನೋಡಾ. ಅನಂತಕೋಟಿ ಅಖಂಡ ಮಹಾಜ್ಞಾನವೇ ಶೃಂಗಾರವಾಗಿಹ ಆ ಮುಕ್ತಾಂಗನೆಯನೆಯ್ದಲೀಯದೆ, ಆ ಮುಕ್ತಾಂಗನೆಯ ಸುತ್ತುವಳಯಾಕೃತವಾಗಿಹ ಅನಂತಕೋಟಿಭೂತಂಗಳು, ಅನಂತಕೋಟಿ ಮಹಾಭೂತಂಗಳು, ಅನಂತಕೋಟಿ ಅತಿಮಹಾಭೂತಂಗಳು ಸುತ್ತಿಕೊಂಡಿಹವು ನೋಡಾ. ಆ ಮುಕ್ತಾಂಗನೆಯ ಅನಂತಕೋಟಿ ಇಂದ್ರರು, ಅನಂತಕೋಟಿ ಬ್ರಹ್ಮರು, ಅನಂತಕೋಟಿ ವಿಷ್ಣ್ವಾದಿಗಳು, ಅನಂತಕೋಟಿ ರುದ್ರರು, ಅನಂತಕೋಟಿ ಈಶ್ವರರು, ಅನಂತಕೋಟಿ ಸದಾಶಿವರು, ಅನಂತಕೋಟಿ ಮುನಿಗಳು, ಅನಂತಕೋಟಿ ದೇವರ್ಕಳು, ಅನಂತಕೋಟಿ ವೇದಾಗಮಂಗಳು, ಅನಂತಕೋಟಿ ಶಾಸ್ತ್ರ ಪುರಾಣಂಗಳೆಲ್ಲ ಕಾಣಲರಿಯವು ನೋಡಾ. ಅಂಥ ಮುಕ್ತಾಂಗನೆಯ ಸದ್ಗುರುಸ್ವಾಮಿ ತಮ್ಮ ಅಖಂಡಮಹಾಜ್ಞಾನ ದೃಕ್ಕಿನಿಂದ ತೋರಲು ಆ ಶಿಷ್ಯನು ಆ ಮುಕ್ತಾಂಗನೆಯ ಕಂಡು ಮೋಹಿಸಿ ಆ ಮುಕ್ತಾಂಗನೆಯನಪ್ಪಿ ಅಗಲದೆ ಆಲಿಂಗನವಂ ಮಾಡುತ್ತ, ಆ ಮುಕ್ತಾಂಗನೆಯ ಪರಬ್ರಹ್ಮದ ಅಖಂಡ ಮಹಾಶಕ್ತಿಯೆಂಬ ಉರಸ್ಥಲದಲ್ಲಿಯ ನಿರಂಜನಪ್ರಣವವೆಂಬ ಅಖಂಡಮಹಾಬಟ್ಟಕುಚಂಗಳ ಪಿಡಿದು ನಾದಬಿಂದುಕಲಾತೀತ ಅಖಂಡಾನಂದಶಕ್ತಿಯೆಂಬ ಆ ಮುಕ್ತಾಂಗನೆಯ ಅಧರಪಾನವಂ ಮಾಡಿ ಪರಬ್ರಹ್ಮದ ಅಖಂಡಮಹಾಶಕ್ತಿಯೆಂಬೆದೆಯಮೇಲೆ ಬಿದ್ದು ತಬ್ಬಿಕೊಂಡು ಪರವಶವಾಗಿ ಎನ್ನ ಭವಂ ನಾಸ್ತಿಯಾಯಿತ್ತು. ಇಂತೀ ಮುಕ್ತಾಂಗನೆಯ ರೂಪ-ಲಾವಣ್ಯ-ಸೌಂದರ್ಯಮಂ ತೋರಿ ಆ ಮುಕ್ತಾಂಗನೆಯೆಂಬ ಅನಂತಕೋಟಿ ಅಖಂಡಮಹಾಜ್ಞಾನ ಸ್ವರೂಪ ಸ್ವಭಾವವಾಗಿಹ ಘನಕೆ ಘನವಾದ ಮಹಾಘನ ಪರಮಪದವಿಯಂ ತೋರಿದ ಮಹಾಶ್ರೀಗುರುವಿಂಗೆ ನಮೋ ನಮೋ ಎಂದು ಪರಮಪದವಿಯೊಳಗೈಕ್ಯವಾಗಿ ಏನೆಂದೆನಲಮ್ಮದೆ ಶಬ್ದಮುಗ್ಧನಾಗಿದ್ದೆನು. ಇದಕ್ಕೆ ಶ್ರುತಿ: ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ |'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.