Index   ವಚನ - 869    Search  
 
ಗಣೇಶ್ವರಿಯೆಂಬ ಮಹಾಶಕ್ತಿಗೆ ಆರುಮುಖವುಂಟು ನೋಡಾ. ಆ ಗಣೇಶ್ವರಿಯೆಂಬ ಮಹಾಶಕ್ತಿ ಆರುಮಕ್ಕಳ ಹಡೆದಳು. ಇಬ್ಬರು ಗಂಡುಮಕ್ಕಳು, ಇಬ್ಬರು ಹೆಣ್ಣುಮಕ್ಕಳು, ಇಬ್ಬರು ನಪುಂಸಕರು ನೋಡಾ. ಇಬ್ಬರು ಗಂಡುಮಕ್ಕಳಿಗೆ ಹದಿನಾರು ಹದಿನಾರು ಮುಖ. ಇಬ್ಬರು ಹೆಣ್ಣುಮಕ್ಕಳಿಗೆ ಮೂವತ್ತೆರಡು ಮೂವತ್ತೆರಡು ಮುಖ. ಇಬ್ಬರು ನಪುಂಸಕರಿಗೆ ಅರುವತ್ತುನಾಲ್ಕು ಅರುವತ್ತುನಾಲ್ಕು ಮುಖ ನೋಡಾ. ಆ ಗಣೇಶ್ವರಿ ಎಂಬ ಮಹಾಶಕ್ತಿಯನು ಇಬ್ಬರು ಗಂಡುಮಕ್ಕಳು, ಇಬ್ಬರು ಹೆಣ್ಣುಮಕ್ಕಳು, ನಪುಂಸಕರಿಬ್ಬರನು ಮಹಾಘನಗಂಭೀರ ನುಂಗಿತ್ತು, ಆ ಮಹಾಘನಗಂಭೀರವನೊಂದು ಮದಾಳಿ ನುಂಗಿತ್ತ ಕಂಡೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.