ಸಕಲಾಗಮ ಶಿಖಾಮಣಿಯನು,
ಅಪ್ರಮಾಣ ಕೂಡಲಸಂಗಯ್ಯನ ನಿರೂಪದಿಂದ
ಪರ ಮೊದಲಾಗಿ ಬ್ರಹ್ಮ ಕಡೆಯಾಗಿ
ಸೃಷ್ಟಿ ಮಾರ್ಗವ ನಿರೂಪಿಸಿಹೆನು,
ಚಿತ್ತೈಸುವದು ಶರಣಜನಂಗಳು.
ಪರಾಪರವಾಗಿಹ ಪರಬ್ರಹ್ಮ
ಲೋಕಾದಿ ಲೋಕಗಳ ಸೃಜಿಸಬೇಕೆಂದು
ನೆನಹುಮಾತ್ರದಲ್ಲಿಯೇ ಆ ಪರಾಪರವಾಗಿಹ ಪರಬ್ರಹ್ಮದಲ್ಲಿ
ಪರ ಉತ್ಪತ್ಯವಾಯಿತ್ತು,
ಆ ಪರದಲ್ಲಿ ಶಿವನುತ್ಪತ್ಯವಾದನು,
ಆ ಶಿವನಲ್ಲಿ ಶಕ್ತಿ ಉತ್ಪತ್ಯವಾದಳು,
ಆ ಶಕ್ತಿಯಲ್ಲಿ ಬಿಂದು ಉತ್ಪತ್ಯವಾಯಿತ್ತು.
ಆ ಬಿಂದುವಿನಲ್ಲಿ ನಾದ ಉತ್ಪತ್ಯವಾಯಿತ್ತು.
ಆ ನಾದದಲ್ಲಿ ಸದಾಶಿವನುತ್ಪತ್ಯವಾದನು.
ಆ ಸದಾಶಿವನ ಗೌಪ್ಯವಕ್ತ್ರದಲ್ಲಿ ಆತ್ಮನುತ್ಪತ್ಯವಾದನು.
ಆ ಸದಾಶಿವನ ಈಶಾನವಕ್ತ್ರದಲ್ಲಿ ಆಕಾಶ ಉತ್ಪತ್ಯವಾಯಿತ್ತು.
ಆ ಸದಾಶಿವನ ತತ್ಪುರುಷವಕ್ತ್ರದಲ್ಲಿ ವಾಯು ಉತ್ಪತ್ಯವಾಯಿತ್ತು.
ಆ ಸದಾಶಿವನ ಅಘೋರಮುಖದಲ್ಲಿ ಅಗ್ನಿ ಉತ್ಪತ್ಯವಾಯಿತ್ತು.
ಆ ಸದಾಶಿವನ ವಾಮದೇವವಕ್ತ್ರದಲ್ಲಿ ಅಪ್ಪು ಉತ್ಪತ್ಯವಾಯಿತ್ತು.
ಆ ಸದಾಶಿವನ ಸದ್ಯೋಜಾತವಕ್ತ್ರದಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು.
ಆ ಸದಾಶಿವನ ಹೃದಯದಲ್ಲಿ ಚಂದ್ರನುತ್ಪತ್ತಿಯಾದನು.
ಆ ಸದಾಶಿವನ ಚಕ್ಷುವಿನಲ್ಲಿ ಸೂರ್ಯನುತ್ಪತ್ತಿಯಾದನು.
ಆ ಸದಾಶಿವನು ಆಕಾಶಕ್ಕೆ ಅಧಿದೇವತೆಯಾಗಿಹನು.
ಆ ಸದಾಶಿವನಲ್ಲಿ ಈಶ್ವರತತ್ವ ಉತ್ಪತ್ಯವಾಗಿ
ವಾಯುವಿಗಧಿದೇವತೆಯಾಗಿಹನು.
ಆ ಈಶ್ವರತತ್ವದಲ್ಲಿ ರುದ್ರನುತ್ಪತ್ತಿಯಾಗಿ
ಅಗ್ನಿಗಧಿದೇವತೆಯಾಗಿಹನು.
ಆ ರುದ್ರನಲ್ಲಿ ವಿಷ್ಣು ಉತ್ಪತ್ತಿಯಾಗಿ
ಅಪ್ಪುವಿಗಧಿದೇವತೆಯಾಗಿಹನು.
ಆ ವಿಷ್ಣುವಿನಲ್ಲಿ ಬ್ರಹ್ಮನುತ್ಪತ್ತಿಯಾಗಿ
ಪೃಥ್ವಿಗಧಿದೇವತೆಯಾಗಿಹನು.
ಆ ಬ್ರಹ್ಮನಲ್ಲಿ ಸರ್ವಜಗಂಗಳು
ಉತ್ಪತ್ಯವಾಯಿತ್ತು ನೋಡಾ.
ಅಪ್ರಮಾಣಕೂಡಲಸಂಗಮದೇವಾ.