ಅಂಥ ಬ್ರಹ್ಮಾಂಡವ ಎಪ್ಪತ್ತುಮೂರುಸಾವಿರದಾ ಏಳುನೂರಾ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಯಾಮ್ಯವೆಂಬ ಭುವನ.
ಆ ಭುವನದೊಳು ವಜ್ರಕಾಯನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರರವತ್ತೈದುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು ನೋಡಾ.
ಮೂನ್ನೂರರವತ್ತೈದು ಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.