ಕಾಯ ಧರ್ಮ ಕರ್ಮವನುಂಬನ್ನಕ್ಕ
ಜೀವ ಭವಕ್ಕೆ ಬಪ್ಪುದು ತಪ್ಪದು.
ಅದು ಕುಂಭದೊಳಗಣ ಜಲ ಹಿಂಗುವನ್ನಕ್ಕ ಹುಗಿಲವಾಯಿತ್ತು.
ಕುಂಭ ಹೋಳಾಗಿ ಜಲ ನೆಲದಲ್ಲಿ ಹಿಂಗೆ,
ಉಭಯದ ಬಂಥ ಬಿಟ್ಟಿತ್ತು.
ಕಾಯ ಕರ್ಮವನರಿಯದೆ ಜೀವ ಭವವನುಣ್ಣದೆ,
ಸರ್ಪನ ದವಡೆಯಲ್ಲಿ ಸಿಕ್ಕಿದ ಕಪ್ಪೆಯಂತೆ
ಆ ವಿಷ ತಪ್ಪಿದ ಮತ್ತೆ ನೆಟ್ಟಹಲ್ಲೇನ ಮಾಡುವದು.
ಇಂತೀ ಗುಣವ ತಪ್ಪೂದು, ತಪ್ಪಿ ಒಪ್ಪವನೊಪ್ಪಿದಲ್ಲಿ
ಬಸವಣ್ಣಪ್ರಿಯ ನಾಗರೇಶ್ವರಲಿಂಗ ನಿಶ್ಚಿಂತನಾಗಿ.