Index   ವಚನ - 100    Search  
 
ವೇದ ಶಾಸ್ತ್ರ ಆಗಮ ಪುರಾಣಂಗಳಿಂದ ಅರಿದೆಹೆನೆಂಬ ಅಜ್ಞಾನಿಗಳು ನೀವು ಕೇಳಿರೊ. ಭಕ್ತಿ ಜ್ಞಾನ ವೈರಾಗ್ಯದಿಂದ ವಿರಕ್ತರಾದೆಹೆವೆಂಬರು ನೀವು ಕೇಳಿರೊ. ವಿರಕ್ತಿ ವಿರಕ್ತಿ ಎಂದೆಂಬಿರಿ ವಿರಕ್ತಿಯ ಪರಿ ಎಂತುಟು ಹೇಳಿರಣ್ಣಾ. ಅಷ್ಟಮದಂಗಳನೊತ್ತಿ ಮೆಟ್ಟಿ, ನೆಟ್ಟನೆ ನಿಂದು ಇಷ್ಟಲಿಂಗವನರಿಯಬಲ್ಲಡೆ ವಿರಕ್ತನೆಂಬೆನು. ಸೆಜ್ಜೆ ಶಿವದಾರವ ಧರಿಸಿ, ಒರ್ವನಾಗಿ ಒಂಟಿ ವಸ್ತ್ರವ ಕಟ್ಟಿ ಸಂತೋಷಿಯಾಗಿರಬಲ್ಲಡೆ ವಿರಕ್ತನೆಂಬೆನು. ಅಂಗದ ಮೇಲೆ ಲಿಂಗವುಳ್ಳ ಲಿಂಗಸಂಗಿಗಳಲ್ಲಿ ಸಂದೇಹ ಸಂಕಲ್ಪವನತಿಗಳೆದು ಬಂದ ಭೇದವನರಿದು, ಲಿಂಗಕ್ಕೆ ಕೊಟ್ಟು ಕೊಳಬಲ್ಲಡೆ ಲಿಂಗೈಕ್ಯನೆಂಬೆನು. ಹೀಂಗಿಲ್ಲದೆ, ಕರದಲ್ಲಿ ತಂದುದನತಿಗಳೆದು ಕರ್ಪರದಲ್ಲಿ ತಂದುದ ಕೈಕೊಂಡು ಲಿಂಗೈಕ್ಯರು ಎಂಬ ಲಿಂಗ ದ್ರೋಹಿಗಳನೆಂತು ಲಿಂಗೈಕ್ಯರೆಂಬೆನಯ್ಯಾ? ಲಿಂಗಾಣತಿಯಿಂದ ಬಂದ ಪದಾರ್ಥವ ಸಂದೇಹದಿಂದತಿಗಳೆದು ಲಿಂಗೈಕ್ಯರೆಂಬ ಲಿಂಗ ದ್ರೋಹಿಗಳ ಸಮ್ಯಕ್‍ಜ್ಞಾನಿಗಳೆಂದಡೆ ಸದಾಚಾರಿಗಳೆಂದಡೆ, ಅನುಭಾವದಲ್ಲಿ ಅಧಿಕರೆಂದಡೆ ಅಘೋರ ನರಕವು ತಪ್ಪದು ಕಾಣಾ. ಅಮುಗೇಶ್ವರಲಿಂಗವನರಿಯದ ಅನಾಚಾರಿಗಳ ಲಿಂಗೈಕ್ಯರೆನಲಾಗದು ಕಾಣಿರಣ್ಣಾ.