Index   ವಚನ - 10    Search  
 
ಭರಿತವೆಂಬ ಶಬ್ದಕ್ಕೆ ಕಡೆಯಾಣಿ, ಭರಿತವೆಂಬ ಸೊಲ್ಲು ಪರಿಪೂರ್ಣತ್ವ ಕುರುಹಳಿದುದು. ಭರಿತಾರ್ಪಣವೆಂಬ ಭಕ್ಷ್ಯ ಮುಂದಕ್ಕೂ ಹಿಂದಕ್ಕೂ ಕಟ್ಟಿಲ್ಲದ ದೃಷ್ಟ, ಭರಿತಾರ್ಪಣವೆಂದು ಕೃತ್ಯದ ಕಟ್ಟ ಹೊತ್ತ ಮತ್ತೆ ಭರಿತಾರ್ಪಣ ಲಿಂಗ ಪ್ರಸಾದ ಕೊಂಡಲ್ಲಿ, ಆ ಮನ ಅರೋಚಕ ತಲೆದೋರಬಾರದು ಭರಿತಾರ್ಪಣವೆಂದು. ನೈವೇದ್ಯವೆಂದು ಸಂದಲ್ಲಿ ಉದಕ ಮುಂತಾದ ಆವ ದ್ರವ್ಯವೂ ಬೀಸರಿಸಿ, ಆ ಪ್ರಸಾದದಲ್ಲಿ ಬೆರೆಯಬಾರದು. ಬೆರೆದ ಮತ್ತೆ ಧರಿಸಬಾರದು, ಇರಿಸಬಾರದು. ಆ ಪ್ರಸಾದವ ಚೆಲ್ಲಿ ಸೂಸಲಿಲ್ಲ. ಮತ್ತೆ ಅರ್ಪಿಸಿಕೊಂಡೆಹೆನೆಂದಡೆ ಬೇರೆ ದೃಷ್ಟದಲ್ಲಿ ಬಂದುದಲ್ಲ. ಬೆರೆದ ದ್ರವ್ಯವ ಮತ್ತರ್ಪಿಸಿಹೆನೆಂದಡೆ ಆ ಪ್ರಸಾದದಲ್ಲಿ ಒಡಗೂಡಿದ ದ್ರವ್ಯ. ಆ ದ್ರವ್ಯ ಒಡಗೂಡಿದಡೆ ಕುರುಹಿಟ್ಟು ನಿಂದಲ್ಲಿ ಅರ್ಪಿಸಿ ಒಡಗೂಡಬಹುದು, ಮತ್ತೆ ವಿಚಾರಿಸಲಿಕಾಗಿ ತನ್ನ ವ್ರತದ ಕಟ್ಟಿನ ನೆಮ್ಮುಗೆಯನರಿತುಕೊಳಬಾರದು. ಬಿಡಬಾರದು ಎಂಬುದ ಒಳಗನರಿದು, ಇಂತೀ ಭರಿತಾರ್ಪಣ ಆರಿಗೂ ಸಾಧ್ಯವಲ್ಲ. ಒಬ್ಬಂಗೆ ಸಾಧ್ಯವಾಯಿತ್ತು. ಬಸವಣ್ಣ ಬೋನವಾಗಿ, ಚೆನ್ನಬಸವಣ್ಣ ಪದಾರ್ಥ ಸ್ವರೂಪವಾದಲ್ಲಿ, ಪ್ರಭುದೇವರು ಸಾಕು ಭರಿತವೆಂದಲ್ಲಿ ಅರ್ಪಿತವಾಯಿತ್ತು, ಭರಿತ ಸಲೆ ಸಂದಿತ್ತು. ಎನಗೆ ಭರಿತ ನೇಮ ಓಸರಿಸುತ್ತಿದೆ. ಪೂರ್ಣವ ಬಿಟ್ಟು, ಪರಿಪೂರ್ಣವ ಮಾಡು ಚೆನ್ನ ಚೆನ್ನಕೂಡಲ ರಾಮೇಶ್ವರಲಿಂಗ ಸಂಗ.