Index   ವಚನ - 1    Search  
 
ಹೋಗುವ ಬನ್ನಿರಯ್ಯ; ಶಕ್ತಿಪಾತವಾದ ಶಿವಯೋಗೀಶ್ವರರು ಶಿವಭಕ್ತರು ಹೋಗುವ ಬನ್ನಿರಯ್ಯ. ಸುಕ್ಷೇತ್ರದಲ್ಲಿರ್ಪ ಮಹಲಿಂಗದರುಶನಕೆ ಹೋಗುವ ಬನ್ನಿರಯ್ಯ. ಜೀವಸಂಚಾರವೆಂಬ ಪ್ರಾಕೃತವೆನಿಸುವ ಅಧೋಕುಂಡಲಿಸ್ವರೂಪಮಾದ ಅಹಂ ಎಂಬ ಹೆಬ್ಬಟ್ಟೆಯಂ ಬಿಟ್ಟು, ಸಜ್ಜೀವವೆಂಬ ವೈಕೃತವೆನಿಸುವ ಮಧ್ಯಕುಂಡಲಿಸ್ವರೂಪಮಾದ ಸೋಹಮೆಂಬ ಸಣ್ಣಬಟ್ಟೆಯ ಹಿಡಿದು ಹೋಗುವ ಬನ್ನಿರಯ್ಯ ಮಹಲಿಂಗದರುಶನಕೆ. ಕೇವಲ ಶಿವಯೋಗವೆಂಬ ಏಕವೆನಿಸುವ ಊರ್ಧ್ವಕುಂಡಲಿಸ್ವರೂಪಮಾದ ಓಂ ಎಂಬ ನುಸುಳುಗಂಡಿಯಂ ನುಸಿದು ಹೋಗುವ ಬನ್ನಿರಯ್ಯ ಮಹಲಿಂಗದರುಶನಕೆ. ದ್ವಯಮಂಡಲವ ಭ್ರೂಮಧ್ಯವೆಂಬ ಮಹಾಮೇರುವ ಮಧ್ಯದಲ್ಲಿ ಏಕಮಂಡಲಾಕಾರ ಮಾಡಿ, ಆ ಕಮಲಮಧ್ಯದಲ್ಲಿ ಮೂರ್ತಿಗೊಂಡಿಪ್ಪ ಮಹಾಲಿಂಗದಲ್ಲಿ ಜೀವಪರಮರಿಬ್ಬರನೇಕಾರ್ಥವಂ ಮಾಡಿ, ಶಾಂಭವೀಮುದ್ರಾನುಸಂಧಾನದಿಂದೆ ಅಧೋಮುಖಕಮಲವೆಲ್ಲ ಊರ್ಧ್ವಮುಖವಾಗಿ, ಆ ಮಹಾಲಿಂಗವ ನೋಡುತಿರಲು ಆ ಕಮಲಸೂತ್ರವಿಡಿದಿಹ ಷಡಾಧಾರಚಕ್ರಂಗಳ ಊರ್ಧ್ವಮುಖವಾಗಿ ಆ ಕಮಲದಲ್ಲಿ ಅಡಗಿ, ಆ ಕಮಲದ ಎಸಳು ಐವತ್ತೆರಡಾಗಿ ಎಸೆವುತಿರ್ಪವು. ಪರಿಪೂರ್ಣ ಜ್ಞಾನದೃಷ್ಟಿಯಿಂ ಆ ಮಹಾಲಿಂಗಮಂ ನಿರೀಕ್ಷಿಸಲು ಆ ಕಮಲದಲ್ಲಿ ಮಹಾಲಿಂಗಸ್ವರೂಪಮಾಗಿ ಸಕಲ ಕರಣೇಂದ್ರಿಯಂಗಳು ಆ ಮಹಾಲಿಂಗದಲ್ಲಿಯೆ ಅಡಗಿ, ಸುನಾದಬ್ರಹ್ಮವೆಂಬ ಇಷ್ಟವೆ ಮಹಾಲಿಂಗವೆಂದರಿದು ನೋಡುತ್ತಿರಲು, ಜ್ಯೋತಿರ್ಮಯವಾಗಿ ಕಾಣಿಸುತಿಪ್ಪುದು. ಅದೇ ಜೀವಪರಮರೈಕ್ಯವು; ಅದೇ ಲಿಂಗಾಂಗಸಂಬಂಧವು. ಆ ಮಹಾಲಿಂಗದ ಕಿರಣಂಗಳೆ ಕರಣಂಗಳಾಗಿ ಆ ಕಮಲವು ಅಧೋಮುಖವಾಗಿ ಆ ಮಹಾಲಿಂಗವು ತನ್ನ ನಿಜನಿವಾಸವೆನಿಸುವ `ಅಂತರೇಣ ತಾಲುಕೇ' ಎಂಬ ಶ್ರುತಿ ಪ್ರಮಾಣದಿ ತಾಲುಮೂಲದ್ವಾದಶಾಂತವೆಂಬ ಬ್ರಹ್ಮರಂಧ್ರದ ಮಧ್ಯದಲ್ಲಿ ಪ್ರಕಾಶಿಸುತ್ತಿರ್ಪುದೊಂದು ಶಿವಚಕ್ರವು. ಆ ಶಿವಚಕ್ರವೆ ಶಿವಲೋಕವೆನಿಸುವುದು. ಆ ಶಿವಲೋಕವೆ ಶಾಂಭವಲೋಕವೆನಿಸುವುದು. ಶಾಂಭವಲೋಕವೆ ಶಾಂಭವಚಕ್ರವೆನಿಸುವುದು. ಆ ಶಾಂಭವಚಕ್ರದಲ್ಲಿ ಆಧಾರವಾದಿ ಪಶ್ಚಿಮಾಂತ್ಯವಾದ ನವಚಕ್ರಂಗಳು ಸಂಬಂಧವಾಗಿರುತಿರ್ಪವು. ಅದು ಹೇಗೆಂದೊಡೆ; ಆ ಶಾಂಭವಚಕ್ರಮಧ್ಯದ ಚತುರ್ದಳಾಗ್ರದಲ್ಲಿ ಅಗ್ನಿಮಂಡಲದಲ್ಲಿ ಅಷ್ಟದಳ ಇರ್ಪುವು. ಆ ಅಷ್ಟದಳ ಚತುರ್ದಳದಲ್ಲಿ `ವಶಷಸ' ಎಂಬ ನಾಲ್ಕಕ್ಷರಯುಕ್ತವಾದ ಆಧಾರಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿ `ನ' ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ತಾರಕಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಗ್ನಿಮಂಡಲದ ಚತುರ್ದಳದ ಈಶಾನ್ಯ ದಳದಲ್ಲಿ `ಬ ಭ ಮ ಯ ರ ಲ' ಎಂಬ ಆರಕ್ಷರಯುಕ್ತವಾದ ಸ್ವಾಧಿಷ್ಠಾನಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಮ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದಂಡಕಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಷ್ಟದಳಾಗ್ರದಲ್ಲಿ ಸೂರ್ಯಮಂಡಲವಿರ್ಪುದು. ಆ ಸೂರ್ಯಮಂಡಲದಲ್ಲಿ `ಡಢಣ ತಥದಧನ ಪಫ' ಎಂಬ ದಶಾಕ್ಷರಯುಕ್ತವಾದ ಮಣಿಪೂರಕಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಶಿ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ಕುಂಡಲಾಕೃತಿಯಲ್ಲಿ ಸಂಬಂಧವಾಗಿರ್ಪುದು. `ಕಖಗಘಙ ಚಛಜಝಞ ಟಠ' ಎಂಬ ದ್ವಾದಶಾಕ್ಷರಯುಕ್ತವಾದ ಅನಾಹತಚಕ್ರವು ಸೂರ್ಯಮಂಡಲದಲ್ಲಿ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ವ'ಕಾರವು ಆ ಮಹಾಲಿಂಗಸ್ವರೂಪವಾದಪ್ರಣವದ ಅರ್ಧಚಂದ್ರಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಷ್ಟದಳದಮಧ್ಯದಲ್ಲಿ ಚಂದ್ರಮಂಡಲವಿರ್ಪುದು. ಆ ಚಂದ್ರಮಂಡಲದಲ್ಲಿ- `ಅ ಆ ಇ ಈ ಉ ಊ ಋ ಋ ಲೃ ಲೄ ಏ ಐ ಓ ಔ ಅಂ ಅಃ' ಎಂಬ ಷೋಡಶಾಕ್ಷರಯುಕ್ತವಾದ ವಿಶುದ್ಧಿಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಯ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದರ್ಪಣಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಮಹಾಲಿಂಗಕ್ಕೆ ಪೀಠಮಾಗಿರ್ದ ಬಿಂದುಯುಕ್ತಮಾದ ಪ್ರಣವವು ಆ ಮಹಾಲಿಂಗದ ಮುಂದಿರ್ದ `ಹಂ ಳಂ ಹಂ ಕ್ಷಂ' ಎಂಬ ಚತುರ್ವರ್ಣಾಕ್ಷರಯುಕ್ತವಾದ ಆಜ್ಞಾಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ ಓಂಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ಜ್ಯೋತಿರಾಕೃತಿಯಲ್ಲಿ ಸಂಬಂಧವಾಗಿರ್ಪುದು. ಚತುರ್ದಳವು ತ್ರಿದಳದಲ್ಲಿ ಕ್ಷ ಉ ಸ ಎಂಬ ತ್ರಯಕ್ಷರಯುಕ್ತವಾದ ಶಿಖಾಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿ `ಕ್ಷ' ಕಾರವು ಆ ಮಹಾಲಿಂಗಸ್ವರೂಪವಾದ ಕುಂಡಲಾಕೃತಿ ಅರ್ಧಚಂದ್ರಾಕೃತಿಗಳಲ್ಲಿ ಸಂಬಂಧವಾಗಿರ್ಪುದು. ಆ ಚತುರ್ದಳದ ಮಧ್ಯದಲ್ಲಿ ಬಟುವೆ ಏಕದಳವೆನಿಸಿಕೊಂಬುದು. ಆ ಏಕದಳದಲ್ಲಿ ಪಶ್ಚಿಮಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಹ್ರಾಂ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದರ್ಪಣಾಕೃತಿ ಜ್ಯೋತಿರಾಕೃತಿಗಳಲ್ಲಿ ಸಂಬಂಧವಾಗಿರ್ಪುದು. ಹೀಂಗೆ ಅಷ್ಟಚಕ್ರಂಗಳ ತನ್ನೊಳಗೆ ಗರ್ಭೀಕರಿಸಿಕೊಂಡು ಬೆಳಗುತ್ತಿರ್ಪುದೊಂದು ಬ್ರಹ್ಮರಂಧ್ರಚಕ್ರವು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ ಹ್ರೀಂ ಕಾರಗಳು. ಆ ಹರದನಹಳ್ಳಿಯ ಪ್ರಭುಲಿಂಗಗುರುಸ್ವಾಮಿಯ ಶಿಷ್ಯರು ನಿಜಾನಂದ ಗುರುಚೆನ್ನಯ್ಯನವರು. ಆ ನಿಜಾನಂದ ಗುರುವಿನ [ಶಿಷ್ಯರು] ಗುರುಸಿದ್ಧವೀರೇಶ್ವರದೇವರು. ಆ ಸಿದ್ಧವೀರೇಶ್ವರದೇವರ ಕರಕಮಲದಲ್ಲಿ ಉದಯವಾದ ಬಾಲಸಂಗಯ್ಯನು ನಾನು. ಆ ನಿರಂಜನ ಗುರುವೆ ತಮ್ಮ ಕೃಪೆಯಿಂದ ತಮ್ಮಂತರಂಗದಲ್ಲಿರ್ದ ಅತಿರಹಸ್ಯವಾದ ಶಾಂಭವಶಿವಯೋಗವೆಂಬ ಮಹಾಜ್ಞಾನೋಪದೇಶಮಂ ಹರಗುರು ವಾಕ್ಯಪ್ರಮಾಣಿನಿಂ ಎನ್ನ ಹೃದಯಕಮಲದಲ್ಲಿ ಕರತಳಾಮಳಕದಂತೆ ತೋರಿ, ಆ ಹೃದಯಕಮಲಕರ್ಣಿಕಾಮಧ್ಯದಲ್ಲಿರ್ಪ ನಿರಂಜನಗುರುವೆ ನಿರಂಜನಮಹಾಲಿಂಗವೆಂದರಿದು ಆ ನಿರಂಜನಮಹಾಲಿಂಗವೆ ಕರಸ್ಥಲದಲ್ಲಿರ್ಪ ಸುನಾದಬ್ರಹ್ಮವೆಂಬ ಇಷ್ಟಲಿಂಗವೆಂದರಿದು, ಆ ಕರಸ್ಥಲದಲ್ಲಿರ್ಪ ಇಷ್ಟಲಿಂಗವೆ ತಾನೆಂದರಿದು "ಮಂತ್ರಮಧ್ಯೇ ಭವೇತ್‌ಲಿಂಗಂ ಲಿಂಗಮಧ್ಯೇ ಭವೇತ್‌ಮಂತ್ರಂ | ಮಂತ್ರಲಿಂಗದ್ವಯಾದೇಕಂ ಇಷ್ಟಲಿಂಗಂತು ಶಾಂಕರಿ ||" ಎಂದುದಾಗಿ, ಎನ್ನ ಹೃತ್ಕಮಲಕರ್ಣಿಕಾಮಧ್ಯದಲ್ಲಿ ಶಾಂಭವೀಮುದ್ರಾನುಸಂಧಾನದಿಂದ ಆ ಲಿಂಗವೆ ಮಂತ್ರ, ಮಂತ್ರವೆ ಲಿಂಗವೆಂದರಿದು ಓಂ ಓಂ ಎಂದು ಶಿವಸಮಾಧಿಯ ಜಪಮಂ ಜಪಿಸುತ್ತ ಜ್ಯೋತಿರ್ಲಿಂಗಮಂ ಕೇಳುತ, ಜ್ಯೋತಿರ್ಲಿಂಗದೊಳು ಮುಳುಗಾಡುತ್ತಿರ್ದೆನಯ್ಯಾ ಬಸವಣ್ಣಪ್ರಿಯ ಚೆನ್ನಸಂಗಯ್ಯನೆಂಬ ಗುರುವಿನ ಕೃಪೆಯಿಂದ, ನಿಮ್ಮ ಶರಣರ ಪಡುಗ ಪಾದರಕ್ಷೆಯ ಹಿಡಿವುದಕ್ಕೆ ಯೋಗ್ಯನಾದೆನಯ್ಯ ನಿಮ್ಮ ಕೃಪೆಯಿಂದ.