Index   ವಚನ - 1    Search  
 
ಕ್ರೀವಿಡಿದು ಗುರುಸಂಬಂಧಿಯಾಗಿ ಜ್ಞಾನವಿಡಿದು ಲಿಂಗಸಂಬಂಧಿಯಾಗಿ. ಘನವಿಡಿದು ಮಹಾಜ್ಞಾನಿಯಾಗಿ, ಅರಿವು ಆಚರಣೆಯ ಕಂಡು, ಜ್ಞಾನ ಮುಕುರವೆಂಬ ಮುಂದಣ ಶ್ರೀಸಂಬಂಧಿಯಾಗಿ. ಆಚಾರದಲ್ಲಿ ಸಂಪನ್ನನಾಗಿ, ಮಹೇಶ್ವರಸ್ಥಲವನರಿದು, ಅದೇ ಜಂಗಮವಾದ ಬಳಿಕ ನಿರಾಕುಳನಾಗಿ ಆಚರಿಸಿದರೆ ಅನಾದಿ ಜಂಗಮವೆಂಬೆ. ಸಾಮವೇದೇ- ವಿವಚಾಸೋವಿಚ ಲಿಂಗಾಲಿಂಗಿ ಚ ಫಲಾದಿ ಬ್ರಹ್ಮರಾಕ್ಷಸ ಸೋವಿಸಂಗಶ್ಚ | ಸೂಕರ ಶತಕೋಟಿ ಜನ್ಮ ಚ ಸೋಪಿ ಕ್ರೀಡಾಲಿಂಗ ಮಲಮೂತ್ರ ಮಾಂಸ ಭುಂಜಿತಃ | ಬ್ರಹ್ಮೇನ ಕೋಟಿ ರಾಕ್ಷಸಃ ಸೋಸಂಗೇನ ಶತಕೋಟಿಗಾರ್ದಭ ಜನ್ಮ ಚ | ಅದೇ ದಾಸಿ ದಾಸೇ ಸೂಕರ ಸಂಗಶಃ ಚ ನಾಃ | ಸೋವ ಮಾತ್ರವೆಂದು ತಂದ ಸ್ತ್ರೀಗಳನು ಶಿಷ್ಯಾದಿ ಪುತ್ರರ ಕೈಯ ಗುರು ತಾಯಿ ಎಂಬ ನಾಮಕರಣಂಗಳನುಂಟುಮಾಡಿ, ತನ್ನ ಅಂಗವಿಕಾರಕ್ಕೆ ತಂದ ಸಂತೆಯ ಡೊಂಬಿತಿಯ ತಂದು, ಹಿರಿಯರಲ್ಲಿ ಸರಿಮಾಡುವ ಜಂಗಮವೆ ಗುರುವೆ? ಅಜ್ಞಾನ ಪುರುಷನಲ್ಲ, ಅವ ಹಿರಿಯತನಕ್ಕೆ ಸಲ್ಲ, ಅವಂಗೆ ಗುರುವಿಲ್ಲ ಲಿಂಗವಿಲ್ಲ, ಜಂಗಮ ಮುನ್ನವೆಯಿಲ್ಲ. ಅವ ಘಟಾತ್ಮನು ಸೋವಿಯ ಸಂಗ ಬೇಡ ಬಿಡಿರಣ್ಣಾ, ಸೋವಿಯ ಸಂಗವ ಮಾಡಿದರೆ ಶತಕೋಟಿ ದಾಸಿಯ ಬಸುರಲ್ಲಿ ಬಂದು, ಹೇಸಿಕೆಯಿಲ್ಲದೆ ಮಲಮೂತ್ರವನು ಹೇಗೆ ಸೂಕರ ಭುಂಜಿಸುವುದೊ ಹಾಂಗೆ ಭುಂಜಿಪನು. ನಾನಾ ಯೋನಿಯ ನರಕುವದು. ಸೋವಿ ಮಾತ್ರೇಣ ಆ ಲಿಂಗನಂ ಗುರು ತಾಯ ಅಪಮಾನ ಸಾಮಾನ್ಯವೆಂದು ಸೋವಿಯ ಸಂಗವ ಮಾಡಿದಡೆ ಎಪ್ಪತ್ತೇಳು ಕೋಟಿ ಶ್ವಪಚಯೋನಿ ತಪ್ಪದಯ್ಯ. ಹನ್ನೆರಡು ಕಂಬ ಸಾಕ್ಷಿಯಾಗಿ, ಕಳಸಕನ್ನಡಿ ಸಾಕ್ಷಿಯಾಗಿ, ತೆಳೆಮಲುಕಟ್ಟಿ ಸಾಕ್ಷಿಯಾಗಿ, ಆಯಿರಣೆಕೋಲು ಸಾಕ್ಷಿಯಾಗಿ, ಮುತ್ತೈದೆತನದಲ್ಲಿ ಶ್ರೇಷ್ಠಯಾಗಿ, ಜ್ಞಾನ ದೃಕ್ಕಿನಿಂ ತಿಳಿದು, ಅನುಭಾವದ ಮುಖವನರಿದಂತೆ, ಆ ಜ್ಞಾನನೇತ್ರವ ಅರಿದು ಧಾರೆಯನೆರೆಸಿಕೊಂಡು, ಅರಿವಿನಲ್ಲಿ ಇರದೆ ಕುರಿಯ ಹೇಲ ತಿಂಬಂತೆ, ಬಾಯಿಗೆ ಬಂದಂತೆ ಸೋವಿಯ ಸಂಗವ ಮಾಡುವವರ ಸರ್ವಾಂಗವೆಲ್ಲ ಗಣಿಕೆಯ ಯೋನಿಯ ಬಸುರ ನೋಡಾ. ಧಾರೆಯನೆರೆಸಿಕೊಂಡು ಕ್ರೀವಿಡಿದು ನಡೆಯದೆ, ತೊತ್ತಿನ ಮಗನಿಗೆ ಪಟ್ಟ ಕಟ್ಟಿದರೆ ಹಾದಿಯ ಎಲುವ ಕಂಡು ಓಡಿಹೋಗಿ ಗಡಗಡನೆ ಕಡಿವಂತೆ, ಸೋವಿಯ ಎಂಜಲ ತಿಂದವಂಗೆ ಗುರುವಿಲ್ಲ. ಅವ ದೇವಲೋಕ ಮತ್ರ್ಯಲೋಕ ಎರಡಕ್ಕೆ ಸಲ್ಲ. ಆವಾಗಮದಲ್ಲಿ ಉಂಟು, ಗಳಹಿ ಹೇಳಿರೊ, ಮಕ್ಕಳಿರಾ. ನೀವು ಬಲ್ಲರೆ ಕಾಳನಾಯ ಹೇಲ ತಿಂಬಂಗೆ ಹಿರಿಯನೆಂದು, ಹೋತನಂತೆ ಗಡ್ಡವ ಬೆಳಸಿಕೊಂಡು ಗುಡರಗುಮ್ಮನಂತೆ ಸುಮ್ಮನಿರುವಿರಿ. ಗರ್ವತನಕ್ಕೆ ಬಂದು ಹಿರಿಯರೆಂದು ಆಚರಣೆ ನ್ಯಾಯವ ಬಗಳುವಿರಿ. ಸೋವಿಸಂಗದಿಂದ ಕನಿಷ್ಠ ನರಕ ಕಾಣಿರಣ್ಣಾ. ಸೋವಿಯ ಸಂಗವ ಬಿಟ್ಟು ಧಾರೆಯ ಸ್ತ್ರೀಯಳ ನೆರದರೆ, ಆಚಾರವಿಡಿದು ನಡೆದು ಆಚರಣೆಯ ನುಡಿದರೆ ಶುದ್ಧವಾಗುವದಲ್ಲದೆ ತೊತ್ತಿನ ಮಗನಾಗಿ ಎಡೆಯ ಸಮಗಡಣವ ಬೇಡುವ ಪಾತಕರ, ಅವರ ಜಂಗಮವೆಂಬೆನೆ? ಸೋವಿಯ ಸಂಗದಿಂದ ಬಂದುದು ಬ್ರಹ್ಮೇತಿ. ಅಥರ್ವಣ ಸಾಮವೇದ ಯಜುರ್ವೇದ ಋಗ್ವೇದ ಇಂತಪ್ಪ ನಾಲ್ಕು ವೇದದಲ್ಲಿ ಶ್ರುತಿ ಸ್ಮೃತಿಗಳಲ್ಲಿ ಆಗಮ ಪುರಾಣಂಗಳಲ್ಲಿ ಸೋವಿಯ ವಾಚ್ಯವೆಂಬುದುಂಟೆ ಪರಮಪಾತಕರಿರಾ? ನೂತನವ ಗಂಟಿಕ್ಕಿ ಜಗಲಿಯೆನ್ನದೆ ಪಟ್ಟಶಾಲೆಯೆಂಬಿಂ ತೊಂಡರಿರಾ. ತೊತ್ತನೊಯ್ದು ತೊತ್ತೆದಾಸಿ ಬಾಯೆನ್ನದೆ ಹೋವಿಯೆಂದು ಬಗಳುವಿರಿ. ಕಲಿಯುಗದಲ್ಲಿ ನೂತನದ ಸೂಳೆಯ ಮಕ್ಕಳು ನೀವು. ಸೋವಿಯ ಸಂಗವ ಮಾಡಿದವನು ಅರಿವುಳ್ಳ ಪುರುಷನಾದರೂ ಆಗಲಿ, ಅರಿದು ಮತ್ತೆ ಅರೆಮರುಳಾದ ಹಿರಿಯರನೇನೆಂಬೆನಯ್ಯಾ. ಅವರು ಪಾತಕನ ಘೋರಿಗಳು. ಅವರು ಇವರುವನರಿಯದ ಅಘೋರಿಗಳೆಂಬ ಇಂತಪ್ಪ ಸೋವಿಯ ಸಂಗವ ಮಾಡುವ ಬ್ರಹ್ಮೇತಿಕಾರ ಪಂಚಮಹಾಪಾತಕರು ಇಹಪರಕ್ಕೆ ಸಲ್ಲರೆಂದುದು. ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಇಹವಿಲ್ಲ ಪರವಿಲ್ಲ, ಮುಕ್ತಿಯ ಫಲವಿಲ್ಲ, ಅಘೋರವಲ್ಲದೆ ಮತ್ತೇನೂ ಇಲ್ಲ. ನಿಮ್ಮಾಣೆ ಭೀಮಬಂಕೇಶ್ವರಾ.