Index   ವಚನ - 1    Search  
 
ಅಂಗದ ಕೈಯಲ್ಲೊಂದಂಗವದೆ ನೋಡಾ. ಲಿಂಗದ ಕೈಯಲ್ಲೊಂದು ಲಿಂಗವದೆ ನೋಡಾ. ಈ ಉಭಯದ ಮಧ್ಯದಲ್ಲಿ ಅರಿದ ತಲೆಯ, ಕೈಯಲ್ಲಿ ಹಿಡಿದುಕೊಂಡು, ಮುಂಡ ಉದಯವಾಯಿತ್ತ ಕಂಡೆ. ಅದಕ್ಕೆ ತಲೆಯಲ್ಲಿ ಓಲೆ, ಮುಂಡದಲ್ಲಿ ಮೂಗುತಿ, ಮೂಗಿನಲ್ಲಿ ಕಣ್ಣು, ಕಿವಿಯಲ್ಲಿ ತೋರಣ, ಕಂಗಳ ಮುತ್ತುಸರವ ಪವಣಿಸುವ ಜಾಣೆಯ ಕಣ್ಣ ಕೈಯ ಲಿಂಗಕ್ಕೆ ಮದುವೆಯ ಮಾಡಿದರೆಮ್ಮವರು. ಆ ಲಿಂಗದಿಂದ ರೂಪಲ್ಲದ, ಸೋಂಕಿಲ್ಲದ ಸೊಬಗಿನ ಅಭಿನವ ಶಿಶು ಹುಟ್ಟಿತ್ತು ನೋಡಾ. ಆ ನಾಮವ ಹಿಡಿದು ಕರೆದಡೆ ಕೈಸನ್ನೆ ಮಾಡಿತ್ತು. ನೋಡಿದಡೆ ಮುಂದೆಬಂದು ನಿಂದಿತ್ತು. ಅಪ್ಪಿದಡೆ ಸೋಂಕಿಲ್ಲದೆ ಹೋಯಿತ್ತು. ಅರಸಹೋದಡೆ ಅವಗವಿಸಿತ್ತು. ನಿಜಗುರು ಭೋಗೇಶ್ವರಾ, ಇದರ ಕೌತುಕದ ಕಾರಣವೇನು ಹೇಳಯ್ಯಾ.