ನೆಲದ ಬೊಂಬೆಗೆ ಜಲದ ಹೊದಿಕೆಯ ಹೊದಿಸಿ,
ಅಗ್ನಿಯ ಆಭರಣವ ತೊಡಿಸಿ, ಆಕಾಶದ ಅರಳೆಲೆಯ ಕಟ್ಟಿ,
ವಾಯುವ ಸೂತ್ರಧಾರವಂ ಹೂಡಿ,
ಸೂರ್ಯ ಸೋಮವೀಥಿಗಳೊಳಗೆ ಎಡೆಯಾಡಿಸುವ ಸೂತ್ರಗನಿವನಾರೋ ?
ಅನಾದಿಯ ಶಿಷ್ಯಂಗೆ ಆದಿಯ ಗುರು
ಉಭಯನಷ್ಟವಾದ ಲಿಂಗವಂ ತಂದು,
ಅಂಗದ ಮೇಲೆ ಬಿಜಯಂಗೈಯಿಸಲೊಡನೆ
ಲಿಂಗನಾಮ ನಷ್ಟವಾಯಿತ್ತು, ಗುರುವಿನ ಕುಲವಳಿಯಿತ್ತು.
ಜಂಗಮದ ಕೈಕಾಲಂ ಮುರಿದು, ಸೂತ್ರಿಕನ ಹಿಡಿದು,
ಮೇಲುದುರ್ಗದಲ್ಲಿ ಶೂಲಕ್ಕೆ ತೆಗೆದು,
ಆ ಸೂತ್ರದ ಹಗ್ಗಮಂ ಹರಿದು ಬಿಸುಟುಹೋದಡೆ
ತಲೆಯ ಒಂದಾಗಿ ಗಂಟಿಕ್ಕಿ,
ಮೂವರ ಮುಂದುಗೆಡಿಸಿ ಒಂದು ಮಾಡಿ,
ಹಿಂದಣಸ್ಥಿತಿ ಮುಂದಣಗತಿಯನೊಂದಾಗಿ ಸುಟ್ಟು,
ಆ ಭಸ್ಮವ ಅಂಗದಲ್ಲಿ ಅನುಲೇಪನವ ಮಾಡಿಕೊಂಡು
ನೀವು ಹೊಕ್ಕಲ್ಲಿ ಹೊಕ್ಕು, ಮಿಕ್ಕು ಮೀರಿ,
ಮಿಗೆವರಿದ ಲಿಂಗಾಂಗಿಗಳ ಪಾದದೊಳು ಹಿಂಗದಂತೆ ಇರಿಸೆನ್ನ.
ನಿಜಗುರು ಭೋಗೇಶ್ವರಾ, ನಾ ನಿಮ್ಮ ಬೇಡಿಕೊಂಬೆ.