Index   ವಚನ - 20    Search  
 
ಮೂರುಲೋಹದ ಕೋಟೆಗೆ ಏಳುಸುತ್ತಿನ ಅಗಳು ನೋಡಾ. ಆ ಕೋಟೆಯೊಳಗೆ ಒಂಬತ್ತು ದುರ್ಗವಿಹವು. ನಾಲ್ಕೈದು ಹೆಬ್ಬಾಗಿಲಿಹವು. ಕಾಬರಿಗೆ ಕಾಣಬಾರದು. ಕಂಡೆ ಕಾಣೆನೆಂಬ ಉಭಯದ ಸಂದಳಿದುಳಿದವರಿಗಲ್ಲದೆ ಕಾಣಬಾರದು. ಆ ಪಟ್ಟಣದೊಳಗೆ ಅತಿರಥ ಮಹಾರಥರಿಹರು. ಸಾವಂತ ಭಲ್ಲೂಕರಿಹರು. ಷಡಾಯತೆ ಚಕ್ರವರ್ತಿಗಳು ಹರಿದು ರಾಜ್ಯವನಾಳುತ್ತಿಹರು. ಇಪ್ಪತ್ತೆಂಟುಲಕ್ಷ ಭೂತತಂಡವಿಹರು. ಹದಿನೆಂಟುಲಕ್ಷ ರಾಕ್ಷಸಸ್ತೋಮವಿಹರು. ಆ ಪಟ್ಟಣವ ಕಾವಳ ಐವಾಯಲ್ಲಿ ತೆಗೆದು ಅವಳ ಮೂಗು ಮೊಲೆಯ ಕೊಯ್ದು ಮೊರೆಗೆಟ್ಟು ಒಡಹುಟ್ಟಿ ದೇವರ ಕೂಡೆ ಹಾದರವನಾಡಿ, ನಿರಾಳದಲ್ಲಿ ನಿಶ್ಚಟನಾಗಿ ನಿಃಶೂನ್ಯವೆಂಬ ಸಿಂಹಾಸನದ ಮೇಲೆ ಸೋಂಕಿಲ್ಲದೆ ಸೊಬಗಿನಲ್ಲಿ ಮೂರ್ತಿಗೊಂಡಿಪ್ಪ ಆ ಮಹಾಪ್ರಭುವಿನ ಪಾದಕ್ಕೆ ನಾನು ನಮೋ ನಮೋ ಎಂದು ಬದುಕಿದೆನು ನೋಡಾ ನಿಜಗುರು ಭೋಗೇಶ್ವರಾ.