Index   ವಚನ - 11    Search  
 
ಅಕ್ಕತಂಗಿಯರೈವರು ಒಬ್ಬನ ಅರಸಿಯರು. ಕಿರಿಯಾಕೆಯ ಕೂಡುವಡೆ ಹಿರಿಯಾಕೆ ಕುಂಟಣಿ. ಹಿರಿಯಾಕೆಯ ಕೂಡುವಡೆ ಕಿರಿಯಾಕೆ ಕುಂಟಣಿ. ಇಬ್ಬರನೂ ಕೂಡುವಡೆ ಬೇರೆಮಾಡಿ ಬೆರಸುಬಾರದೆಂದರಿದು, ಒಂದಾಗಿ ಕೂಡಲು ಒಬ್ಬಾಕೆ ಕಣ್ಣ ಕೆಚ್ಚನೆ ಮಾಡುವಳು. ಒಬ್ಬಾಕೆ ಬುದ್ಧಿಯ ಹೇಳುವಳು ಒಬ್ಬಾಕೆ ಹಾಸಿ ಕೊಡುವಳು. ಈ ಐವರನೂ ಅಪ್ಪಿಕೊಂಡು ಒಂದೆಬಾರಿ ಬೆರಸಲು ನೀರು ನೀರ ಬೆರಸಿದಂತಾಯಿತು ಕಲಿದೇವಯ್ಯಾ. ನಿಮ್ಮ ಶರಣ ಸಿದ್ಧರಾಮಯ್ಯದೇವರು ಎನಗೆ ಈ ಪಥವ ಕಲಿಸಿ, ನಿಜನಿವಾಸದಲ್ಲಿರಿಸಿದ ಕಾರಣ ಆನು ನಮೋ ನಮೋ ಎನುತಿರ್ದೆನು.