Index   ವಚನ - 20    Search  
 
ಅಯ್ಯಾ ಅಯ್ಯಾ ಎಂದು ನೆನೆವುತ್ತಿಹರಯ್ಯಾ ಗಂಗೆವಾಳುಕಸಮಾರುದ್ರರು, ಅವರಿಗೆ ಪ್ರಸಾದಲಿಂಗವ ಸಾಹಿತ್ಯವ ಮಾಡಿದ ಕಾರಣ. ಅಯ್ಯಾ ಅಯ್ಯಾ ಎಂದು ಹೊಗಳುತ್ತಿಹರಯ್ಯಾ ಏಕಾದಶರುದ್ರರು, ಅವರಿಗೆ ಸಕಲ ನಿಃಕಲಾತ್ಮಕ ನೀನೆಯಾಗಿ ಪ್ರಾಣಲಿಂಗವ ಸಾಹಿತ್ಯವ ಮಾಡಿದ ಕಾರಣ. ಶಿವಶಿವಾ ಎನುತಿರ್ಪರಯ್ಯಾ ವಿಷ್ಣು ಮೊದಲಾದ ತ್ರೈತಿಂಶತಿಕೋಟಿ ದೇವತೆಗಳು, ಅವರಿಗೆ ಧರ್ಮಾರ್ಥಕಾಮಮೋಕ್ಷಂಗಳನಿತ್ತೆಯಾಗಿ. ಹರಹರಾ ಎನುತಿರ್ಪರಯ್ಯಾ ಬ್ರಹ್ಮ ಮೊದಲಾದ ಅಷ್ಟಾಶೀತೀಸಹಸ್ರ ಋಷಿಯರು, ಅವರಿಗೆ ಸ್ವರ್ಗ ನರಕಾದಿಗಳ ಮಾಡಿದೆಯಾಗಿ. ಮಹಾದೇವಾ ಮಹಾದೇವಾ ಎನುತಿರ್ಪರಯ್ಯಾ ದಾನವಾದಿಗಳು ಅವರಿಗೆ ಸುಕೃತ ದುಃಕೃತಂಗಳನೀವೆಯಾಗಿ. ಬಸವಾ ಬಸವಾ ಎನುತಿರ್ಪರಯ್ಯಾ ಮಹಾಭಕ್ತರು, ಅವರಿಗೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ತೋರಿದ ಕಾರಣ. ಉಳಿದ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೆಲ್ಲ ನಿಮ್ಮುವನನಿಮಿಷವಾಗಿ ನೋಡುತಿರ್ಪರಯ್ಯಾ, ಸಕಲ ನಿಃಕಲಾತ್ಮಕ ಚೈತನ್ಯನಾದೆಯಾಗಿ. ಸಕಲವೂ ನಿನ್ನಾಧಾರ, ನಿಃಕಲವೂ ನಿನ್ನಾಧಾರ. ಸಕಲ ನಿಃಕಲದೊಡೆಯ ದೇವರದೇವ ಕಲಿದೇವಾ ನಿಮ್ಮ ಕರಸ್ಥಲದ ಹಂಗಿನೊಳಗಿರ್ದ ಕಾರಣ ಸಂಗನಬಸವಣ್ಣ.