Index   ವಚನ - 23    Search  
 
ಅಯ್ಯಾ, ಗುರುಲಿಂಗಜಂಗಮದ ಶುದ್ಧಸಿದ್ಧಪ್ರಸಿದ್ಧಪ್ರಸಾದಿಯಾದಡೆ ತನ್ನ ಪವಿತ್ರಸ್ವರೂಪವಾದ ಗುರುಲಿಂಗಜಂಗಮಕ್ಕೆ ನಿಂದ್ಯಕುಂದ್ಯಗಳ ಕಲ್ಪಿಸಿ, ಅರ್ಥಪ್ರಾಣಾಭಿಮಾನವ ಕೊಂಡ ಗುರುಲಿಂಗಜಂಗಮದ್ರೋಹಿಗಳ ಸಮಪಂಕ್ತಿಯಲ್ಲಿ ಅರ್ಚನಾರ್ಪಣಗಳ ಮಾಡ ನೋಡಾ. ಆ ದ್ರೋಹಿಗಳಿಗೆ ಪಾದೋದಕ ಪ್ರಸಾದವ ಕೊಟ್ಟು ಕೊಳ್ಳ ನೋಡಾ. ಆ ದ್ರೋಹಿಗಳ ಸರ್ವಾವಸ್ಥೆಯಲ್ಲಿ ಧ್ಯಾನಕ್ಕೆ ತಾರ ನೋಡಾ. ಆ ದ್ರೋಹಿಗಳಿಗೆ ಶರಣೆಂದು ನುಡಿದು ವಂದಿಸ ನೋಡಾ. ಈ ವಿಚಾರವನರಿದಡೆ ಮಹಾಚಿದ್ಘನಪ್ರಸಾದಿಯೆಂಬೆನಯ್ಯಾ. ಈ ವಿಚಾರವನರಿಯದ ವೇಷಧಾರಕ ಉದರಪೋಷಕ ನುಡಿಜಾಣರ ನೋಡಿ, ಮನ ಭಾವಂಗಳಲ್ಲಿ ಊರಿಂದ ಹೊರಗಣ ಹಿರಿಯಕುಲದವರ ಮನೆಯ ಹೊರಬಳಕೆಯ ಬೋಕಿಯೆಂದು ಬಿಡುವೆ ನೋಡಾ, ಕಲಿದೇವರ ದೇವ. ಇಂತು ಗುರುವಾಕ್ಯವ ಮೀರಿ ತನ್ನ ಅಂಗವಿಕಾರದಾಸೆಗೆ ಚರಿಸುವಾತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. ಪಾದೋದಕ ಪ್ರಸಾದ ಮುನ್ನವೆ ಇಲ್ಲ ನೋಡಾ, ಸಂಗನಬಸವಣ್ಣ.