ಅಯ್ಯಾ, ತನ್ನ ತಾನರಿಯದೆ
ನಾವು ಏಕಾರತಿ ದ್ವಿಯಾರತಿ [ತ್ರಿಯಾರತಿ] ಚತುರಾರತಿ ಪಂಚಾರತಿ
ಷಡಾರತಿ ಸಪ್ತಾರತಿ ಅಷ್ಟಾರತಿ ನವಾರತಿ ದಶಾರತಿ
ಕಡ್ಡಿಬತ್ತಿ ಕರ್ಪುರಾರತಿ ಮೊದಲಾದ
ಅಷ್ಟವಿಧಾರ್ಚನೆ ಷೋಡಶೋಪಚಾರದಿಂದರ್ಚಿಸುವ
ಇಷ್ಟಲಿಂಗಪೂಜಕರೆಂದು ನುಡಿದುಕೊಂಬ ಬದ್ಧಭವಿ ಶುದ್ಧಶೈವ
ಮರುಳುಮಾನವರೆನಗೊಮ್ಮೆ ತೋರದಿರಯ್ಯ.
ಅದೇನು ಕಾರಣವೆಂದಡೆ, ತನ್ನ ಅಂಗ ಮನ ಪ್ರಾಣೇಂದ್ರಿಯಂಗಳಲ್ಲಿ ಮುಸುಕಿದ
ಅಜ್ಞಾನಾಂಧಕಾರದ ಅರುವತ್ತಾರುಕೋಟಿ ಕರಣಂಗಳೆಂಬ ಕಂಚಿನಾರತಿಗಳ
ಹಂಚು ಹರಿಗಡಿದು, ಅಷ್ಟತನುಗಳ ಸುಟ್ಟುರುಹಿದ ಬೂದಿಯಿಂದ ಬೆಳಗಿ,
ಚಿಜ್ಜಲದಿಂದ ತೊಳೆದು ಕಳೆದುಳಿಯಲರಿಯದೆ,
ತನ್ನ ಹೃದಯಮಂದಿರದಲ್ಲಿ ನೆಲಸಿರುವ
ಚಿದ್ಘನ ಚಿತ್ಪ್ರಕಾಶ ಚಿನ್ಮಯ ಶ್ರೀಗುರುಲಿಂಗಜಂಗಮಕ್ಕೆ
ಮನೋಪ್ರಕೃತಿಯಳಿದ ಉನ್ಮನವೆಂಬ ಏಕಾರತಿ,
ಲಿಂಗಾಂಗವೆಂಬುಭಯವಳಿದ ದ್ವಿಯಾರತಿ,
ಮಲತ್ರಯಂಗಳಳಿದ ತ್ರಿಯಾರತಿ,
ಚತುಃಕರಣಂಗಳಳಿದ ಚತುರಾರತಿ,
ಪಂಚಭೂತ ಪಂಚವಾಯು ಪಂಚೇಂದ್ರಿಯ
ಪಂಚಕ್ಲೇಶ ಪಂಚಮೂರ್ತಿಗಳ
ಫಲಪದಂಗಳ ಕಳೆದುಳಿದ ಪಂಚಾರತಿ,
ಷಡ್ವರ್ಗ ಷಡೂರ್ಮಿ ಷಡ್ಭ್ರಮೆ ಷಡ್ಭಾವವಿಕಾರಂಗಳಳಿದ ಷಡಾರತಿ,
ಸಪ್ತಧಾತು ಸಪ್ತವ್ಯಸನಂಗಳಳಿದ ಸಪ್ತಾರತಿ,
ಅಂತರಂಗದಷ್ಟಮದ ಬಹಿರಂಗದಷ್ಟಮದಂಗಳಳಿದ ಅಷ್ಟಾರತಿ,
ನವಗ್ರಹಂಗಳಳಿದ ನವಾರತಿ,
ದಶೇಂದ್ರಿಯ ದಶವಾಯುಗಳಳಿದ ದಶಾರತಿ.
ಅಹಂಕಾರಗಳಳಿದ ಕಡ್ಡಿಬತ್ತಿ,
ತನುತ್ರಯ ಗುಣತ್ರಯ ಅವಸ್ಥಾತ್ರಯ ಮನತ್ರಯ
ಆತ್ಮತ್ರಯ ಭಾವತ್ರಯಂಗಳ ಕಳೆದುಳಿದ ಕರ್ಪುರಾರತಿಯ ಬೆಳಗಿ
ನಿರ್ವಯಲಪದವನೈದಲರಿಯದೆ,
ಬಹಿರಂಗದ ಭಿನ್ನಕ್ರೀ ಭಿನ್ನಜ್ಞಾನ ಭಿನ್ನಭಕ್ತಿ ಮುಂದುಗೊಂಡು,
ಗಡ್ಡ ಜಡೆ ಮುಡಿಗಳ ಬಿಟ್ಟುಕೊಂಡು,
ಲಾಂಛನವ ಹೊದ್ದುಕೊಂಡು, ಕಾಂಚನಕ್ಕೆ ಕೈಯೊಡ್ಡುತ
ಕಂಚಗಾರನಂತೆ ನಾನಾ ಜಿನಸಿನ ಕಂಚ ನೆರಹಿ ಹರವಿಕೊಂಡು,
ಪರಮಶಿವಲಿಂಗ ಪೂಜಕರೆಂದು ಬಗಳುವ ಪಂಚಮಹಾಪಾತಕರಿಗೆ
ಕಿರಾತರು ಮೆಚ್ಚುವರಲ್ಲದೆ ಪುರಾತರು ಮೆಚ್ಚುವರೆ ?
ಬದ್ಧಭವಿಯಾದ ಶೈವರು ಮೆಚ್ಚುವರಲ್ಲದೆ
ಶುದ್ಧ ಸುಶೀಲ ನಿರಾಭಾರಿ ವೀರಶೈವರು ಮೆಚ್ಚುವರೆ ?
ಅಜ್ಞಾನಿಗಳು ಮೆಚ್ಚುವರಲ್ಲದೆ ನಿರ್ವ್ಯಾಪಾರಿಗಳು ಮೆಚ್ಚರು.
ಭಿನ್ನಕ್ರೀಯಸ್ಥರು ಮೆಚ್ಚುವರಲ್ಲದೆ ಅಭಿನ್ನಕ್ರೀಯಸ್ಥರು ಮೆಚ್ಚರು.
ಇಂತಪ್ಪ ಲಿಂಗಾಂಗಸಮರಸದ ನಿರ್ಗುಣಪೂಜೆಯನೆಸಗಲರಿಯದ
ಭಿನ್ನಜ್ಞಾನ ಭಿನ್ನಪೂಜೆಯನೆಸಗುವ ಮರುಳುಗಳಿಗೆ
ಆರು ಮೆಚ್ಚುವರು ? ಹುಚ್ಚು ಮರುಳುಗಳಿರಾ
ಸುಮ್ಮನಿರಿಯೆಂದಾತ ನಿಮ್ಮ ಶರಣ ಕಲಿದೇವರದೇವ.
Art
Manuscript
Music
Courtesy:
Transliteration
Ayyā, tanna tānariyade
nāvu ēkārati dviyārati [triyārati] caturārati pan̄cārati
ṣaḍārati saptārati aṣṭārati navārati daśārati
kaḍḍibatti karpurārati modalāda
aṣṭavidhārcane ṣōḍaśōpacāradindarcisuva
iṣṭaliṅgapūjakarendu nuḍidukomba bad'dhabhavi śud'dhaśaiva
maruḷumānavarenagom'me tōradirayya.
Adēnu kāraṇavendaḍe, tanna aṅga mana prāṇēndriyaṅgaḷalli musukida
ajñānāndhakārada aruvattārukōṭi karaṇaṅgaḷemba kan̄cināratigaḷa
han̄cu harigaḍidu, aṣṭatanugaḷa suṭṭuruhida būdiyinda beḷagi,
cijjaladinda toḷedu kaḷeduḷiyalariyade,
Tanna hr̥dayamandiradalli nelasiruva
cidghana citprakāśa cinmaya śrīguruliṅgajaṅgamakke
manōprakr̥tiyaḷida unmanavemba ēkārati,
liṅgāṅgavembubhayavaḷida dviyārati,
malatrayaṅgaḷaḷida triyārati,
catuḥkaraṇaṅgaḷaḷida caturārati,
pan̄cabhūta pan̄cavāyu pan̄cēndriya
pan̄caklēśa pan̄camūrtigaḷa
phalapadaṅgaḷa kaḷeduḷida pan̄cārati,
ṣaḍvarga ṣaḍūrmi ṣaḍbhrame ṣaḍbhāvavikāraṅgaḷaḷida ṣaḍārati,
saptadhātu saptavyasanaṅgaḷaḷida saptārati,
antaraṅgadaṣṭamada bahiraṅgadaṣṭamadaṅgaḷaḷida aṣṭārati,
Navagrahaṅgaḷaḷida navārati,
daśēndriya daśavāyugaḷaḷida daśārati.
Ahaṅkāragaḷaḷida kaḍḍibatti,
tanutraya guṇatraya avasthātraya manatraya
ātmatraya bhāvatrayaṅgaḷa kaḷeduḷida karpurāratiya beḷagi
nirvayalapadavanaidalariyade,
bahiraṅgada bhinnakrī bhinnajñāna bhinnabhakti mundugoṇḍu,
gaḍḍa jaḍe muḍigaḷa biṭṭukoṇḍu,
lān̄chanava hoddukoṇḍu, kān̄canakke kaiyoḍḍuta
kan̄cagāranante nānā jinasina kan̄ca nerahi haravikoṇḍu,
paramaśivaliṅga pūjakarendu bagaḷuva pan̄camahāpātakarige
Kirātaru meccuvarallade purātaru meccuvare?
Bad'dhabhaviyāda śaivaru meccuvarallade
śud'dha suśīla nirābhāri vīraśaivaru meccuvare?
Ajñānigaḷu meccuvarallade nirvyāpārigaḷu meccaru.
Bhinnakrīyastharu meccuvarallade abhinnakrīyastharu meccaru.
Intappa liṅgāṅgasamarasada nirguṇapūjeyanesagalariyada
bhinnajñāna bhinnapūjeyanesaguva maruḷugaḷige
āru meccuvaru? Huccu maruḷugaḷirā
sum'maniriyendāta nim'ma śaraṇa kalidēvaradēva.