ಅರಿವನಾರಡಿಗೊಂಡಿತ್ತು ಮರಹು.
ಮರಹನಾರಡಿಗೊಂಡಿತ್ತು ಮಾಯೆ.
ಮಾಯೆಯನಾರಡಿಗೊಂಡಿತ್ತು ಕರ್ಮ.
ಕರ್ಮವನಾರಡಿಗೊಂಡಿತ್ತು ತನು.
ತನುವನಾರಡಿಗೊಂಡಿತ್ತು ಸಂಸಾರ.
ಮರಹು ಬಂದಹುದೆಂದರಿದು
ಅರಿವ ಬೆಲೆ ಮಾಡಿ, ಅರಿವ ಕೊಟ್ಟು
ಗುರುವಿನ ಕೈಯಲ್ಲಿ ಲಿಂಗವ ಕೊಂಡೆ ನೋಡಯ್ಯ.
ಎನ್ನರಿವನಾಯತದಲ್ಲಿ ನಿಲಿಸಿ,
ನಿಜ ಸ್ವಾಯತವ ಮಾಡಿದನು
ಕಲಿದೇವರದೇವಾ, ನಿಮ್ಮ ಶರಣ ಬಸವಣ್ಣ.