Index   ವಚನ - 46    Search  
 
ಅಷ್ಟಮದ ಸಪ್ತವ್ಯಸನ ಷಡುವರ್ಗಂಗಳ ಒತ್ತಿ ನಿಲಿಸಿ, ಎಲ್ಲಕ್ಕೆ ಶಿವನೊಬ್ಬನೆ, ಶಿವಜ್ಞಾನವೆಂದರಿಯದ ವಿಪ್ರರು, ಆನೆ ಅಶ್ವ ಹೋತ ಕೋಣ ಬಿಂಜಣದಿಂದ ಕಡಿದು, ಬೆಂಕಿಯ ಮೇಲೆ ಹಾಕಿ, ತಾನು ಪರಬ್ರಹ್ಮನಾದೆನೆಂದು ನರಕಕ್ಕೆ ಹೋದರೊಂದುಕೋಟ್ಯಾನುಕೋಟಿ ಬ್ರಹ್ಮರು. ವೇದದ ಅರ್ಥವನರಿಯದೆ ಜೀವನ ಬಾಧೆಯಂ ಮಾಡುವ ವಧಾಸ್ವಕರ್ಮಕ್ಕೆ ಒಳಗಾದರು, ದ್ವಿಜರಂದು. ಆದಿಯ ಪ್ರಮಥರು ಕಂಡುದೆಂತೆಂದಡೆ : ಆನೆಯೆಂಬುದು ಮದ, ಮತ್ಸರವೆಂಬುದು ಅಶ್ವ, ಕೋಣನೆಂಬುದು ಕ್ರೋಧ, ಅಂಗವಿಕಾರವೆಂಬುದು ಹೋತ. ಇಂತು ನಾಲ್ಕು ವರ್ಗಂಗಳು. ಶಿವಜ್ಞಾನವೆಂಬ ಅಗ್ನಿಯಲ್ಲಿ ದಹನ ಮಾಡುವರು ನಮ್ಮವರು. ಇಂತೀ ವಿವರವಿಲ್ಲದೆ ತಾವು ಪರಬ್ರಹ್ಮರೆನಿಸಿಕೊಂಬ, ಜೀವಹಿಂಸೆಯ ಮಾಡುವ ವಿಪ್ರರ ಮುಖವ ನೋಡಲಾಗದೆಂದ ಕಲಿದೇವರದೇವ.