ಆದಿ ಅನಾದಿಯಿಂದತ್ತಣ ನಿತ್ಯಸಿಂಹಾಸನವೆಂಬ
ಮಹಾಮೇರುಮಂದಿರದ ಮೇಲೆ ಇರ್ದಂತೆಯೆ
ಆಧಾರಮೂರ್ತಿಗಳನು ನಿರ್ಮಿಸಿದಿರಿ.
ನಮಗಾಶ್ರಯವಾವುದು ದೇವಾ ಎಂದು ಗಣಂಗಳು ಬಿನ್ನಹವಂ ಮಾಡಲು,
ವಿಶ್ವತೋ ಪ್ರತಿಪಾಲಕ ವಿಶ್ವಾಧಾರಕ ಶಿವನು,
ಸರ್ವಜೀವಜಾಲಂಗಳಿಗೆ ಶೈತ್ಯಕಾಲವಾಗಬೇಕೆಂದು
ಅನಂತಮೂರ್ತಿಗಳಿಗೆ ಕಾರುಣ್ಯವ ಮಾಡಿದ ಕಂದನು.
ತಮ್ಮ ತಮ್ಮ ಆಧಾರದಲ್ಲಿ ಒಮ್ಮಿಂದವು ಪಾದಘಾತದೊಳು
ಅನಂತಸುಖವುತ್ಪತ್ಯದೊಳು ಶಿವ,
ಶಿವಚೈತನ್ಯವನಾಗವೆ ನಿರ್ಮಿಸುವೆನೆಂದು
ಪೃಥ್ವಿಗೆ ಕಾರುಣ್ಯವ ಮಾಡಿದ ಕಂದನು.
ತೇಜಜ್ಞಾನದೊಳು ಶುದ್ಧತಿಗೆ ನಿಮ್ಮ ಮುಖದಲ್ಲಿಯೆಯೆಂದು
ತೇಜಕ್ಕೆ ಕಾರುಣ್ಯವ ಮಾಡಿದ ಕಂದನು.
ವಾಯು ಮನ ಪ್ರಾಣ ಗಂಧ ಪರಿಮಳದಲ್ಲಿ ಶೈತ್ಯದೊಳು
ಸುಖವಿರು ಕಂಡಾ ಎಂದು ವಾಯುವಿಗೆ ಕಾರುಣ್ಯವ ಮಾಡಿದ ಕಂದನು.
ಗಗನದ ಸರ್ವಕ್ಕಾಶ್ರಯವಾಗಿರು ಕಂಡಾ ಎಂದು
ಆಕಾಶಕ್ಕೆ ಕಾರುಣ್ಯವ ಮಾಡಿದ ಕಂದನು.
ಚಂದ್ರಸೂರ್ಯರು ಆತ್ಮರು ನಿಮ್ಮ ನಿಮ್ಮ ಸ್ಥಲಗಳಲ್ಲಿಯೆ
ಒಬ್ಬೊಬ್ಬರು ಅಗಲದಿರಿಯೆಂದು,
ಅಷ್ಟತನುಗಳಿಗೆ ಕಾರುಣ್ಯವ ಮಾಡಿದ ಕಂದನು.
ಮಹಾಪ್ರತಿಪಾಲಕನು ಶರಣರ ಹೃದಯದ ಸಿಂಹಾಸನವನು
ಎನ್ನ ಪ್ರಾಣವ ಪಾವನವ ಮಾಡಿದ ಕಂದನು.
ವೇದ್ಯನೆ ಕಲಿದೇವ, ನಿಮ್ಮ ಶರಣ ಬಸವಣ್ಣಂಗೆ ಜಯತು ಜಯತು.