ಆದಿ ಅನಾದಿಯಿಂದತ್ತತ್ತ ಮೀರಿ ತೋರುವ ಪರಾತ್ಪರವಸ್ತುವೆ
ತನ್ನ ಚಿದ್ವಿಲಾಸದಿಂದ ತಾನೆ ಜಗತ್ಪಾವನಮೂರ್ತಿಯಾಗಿ,
ತನ್ನಂತರಂಗ ಬಹಿರಂಗದಲ್ಲಿ ಭಕ್ತಿ ಜ್ಞಾನ ವೈರಾಗ್ಯ ಪಟ್ಸ್ಥಲಮಾರ್ಗವಿಡಿದು
ಭಕ್ತಿಪ್ರಿಯರಾಗಿ, ತಮ್ಮಂತರಂಗದೊಳಗೆ
ಷಡ್ವಿಧಸಕೀಲ ಛತ್ತೀಸಸಕೀಲ ನಾಲ್ವತ್ತೆಂಟುಸಕೀಲ ಐವತ್ತಾರುಸಕೀಲ
ಅರುವತ್ತಾರುಸಕೀಲ ತೊಂಬತ್ತಾರುಸಕೀಲ ನೂರೆಂಟುಸಕೀಲ
ಇನ್ನೂರ ಹದಿನಾರುಸಕೀಲ ಮೊದಲಾದ ಸಮಸ್ತಸಕೀಲಂಗಳನೊಳಕೊಂಡು,
ಬೆಳಗುವ ಗುರು ಲಿಂಗ ಜಂಗಮವ ಕಂಗಳು ತುಂಬಿ,
ಮನ ತುಂಬಿ ಭಾವ ತುಂಬಿ ಕರಣಂಗಳು ತುಂಬಿ,
ತನು ತುಂಬಿ ಪ್ರಾಣ ತುಂಬಿ ಸರ್ವಾಂಗ ತುಂಬಿ,
ಅರ್ಚಿಸಲರಿಯದೆ, ಹಲವನರಸಿ, ತೊಳಲುವ ಮೂಳರ ಕಂಡು
ಬೆರಗಾದೆ ನೋಡಾ, ಕಲಿದೇವರದೇವ.