Index   ವಚನ - 78    Search  
 
ಉಂಬ ಕೂಳಿಗೆ ಉಪದೇಶವ ಮಾಡುವ ಚುಂಬಕರು ಹೆಚ್ಚಿ, ಭಕ್ತಿಯ ಪಥವ ಕೆಡಿಸಿದರು. ಡೊಂಬ ಡೋಹರ ಹೊಲೆಯರು ಮಾದಿಗರು ಉಪದೇಶವಿಲ್ಲದವರು ಪಿಂಬೇರ ಅನಾಚಾರಿಯ ಆರಾಧಿಸಿ, ಶಂಭುವಿನ ಸರಿಯೆಂದು ಅವರೊಳಗೆ ಹಲವರು ಕೊಂಬನೂದುವ, ಸೊಣಕನ ಕೊರಳಲ್ಲಿ ಬಾರ ಕವಡೆಯ ಕಟ್ಟಿಕೊಂಡು ನಾಯಾಗಿ ಬೊಗಳುವರು. ಕಂಬದ ಬೊಂಬೆಯ ಮಾಡಿ ಮೈಲಾರ ಭೈರವ ಆಯಿರ (?) ಧೂಳ ಕೇತನೆಂಬ ಕಾಳುದೈವವ ಊರೂರದಪ್ಪದೆ ತಿರಿದುತಿಂಬ ಡಂಭಕರ ಕೈಯಲ್ಲಿ ಉಪದೇಶವ ಕೊಂಡವರು, ಗುರುಲಿಂಗಜಂಗಮದ ಹೊಲಬನರಿಯದೆ ಭಂಗಿತರಾದರು. ಅಂಗದ ಮೇಲಣ ಸೂತಕ ಹಿಂಗದು. ಅನ್ಯದೈವದ ಜಾತ್ರೆಗೆ ಹೋಗಿ, ನಾಡನರಕದಲ್ಲಿ ಬೆರಣಿಯ ಮಾಡುವ ನಾನಾ ಜಾತಿಗಳು ಹರಕೆಯ ಹಿಂಗಿಸದೆ, ಗುರುಕಾರುಣ್ಯವ ಕೊಟ್ಟವಂಗೆ ಕುಂಭಿನಿಪಾತಕ ತಪ್ಪದೆಂದ ಕಲಿದೇವರದೇವಯ್ಯ.