Index   ವಚನ - 97    Search  
 
ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ ಬಸವಣ್ಣ. ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ ಬಸವಣ್ಣ. ಎನ್ನ ಕಾರಣತನುವಿಂಗೆ ಭಾವಲಿಂಗವಾದಾತ ಬಸವಣ್ಣ. ಎನ್ನ ದೃಕ್ಕಿಂಗೆ ಇಷ್ಟಲಿಂಗವಾದಾತ ಬಸವಣ್ಣ. ಎನ್ನ ಮನಕ್ಕೆ ಪ್ರಾಣಲಿಂಗವಾದಾತ ಬಸವಣ್ಣ. ಎನ್ನ ಭಾವಕ್ಕೆ ತೃಪ್ತಿಲಿಂಗವಾದಾತ ಬಸವಣ್ಣ. ಎನ್ನ ನಾಸಿಕಕ್ಕೆ ಆಚಾರಲಿಂಗವಾದಾತ ಬಸವಣ್ಣ. ಎನ್ನ ಜಿಹ್ವೆಗೆ ಗುರುಲಿಂಗವಾದಾತ ಬಸವಣ್ಣ. ಎನ್ನ ನೇತ್ರಕ್ಕೆ ಶಿವಲಿಂಗವಾದಾತ ಬಸವಣ್ಣ. ಎನ್ನ ತ್ವಕ್ಕಿಂಗೆ ಜಂಗಮಲಿಂಗವಾದಾತ ಬಸವಣ್ಣ. ಎನ್ನ ಶ್ರೋತ್ರಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ. ಎನ್ನ ಹೃದಯಕ್ಕೆ ಮಹಾಲಿಂಗವಾದಾತ ಬಸವಣ್ಣ. ಎನ್ನ ಸುಚಿತ್ತವೆಂಬ ಹಸ್ತಕ್ಕೆ ಆಚಾರಲಿಂಗವಾದಾತ ಬಸವಣ್ಣ. ಎನ್ನ ಸುಬುದ್ಧಿಯೆಂಬ ಹಸ್ತಕ್ಕೆ ಗುರುಲಿಂಗವಾದಾತ ಬಸವಣ್ಣ. ಎನ್ನ ನಿರಹಂಕಾರವೆಂಬ ಹಸ್ತಕ್ಕೆ ಶಿವಲಿಂಗವಾದಾತ ಬಸವಣ್ಣ. ಎನ್ನ ಸುಮನವೆಂಬ ಹಸ್ತಕ್ಕೆ ಜಂಗಮಲಿಂಗವಾದಾತ ಬಸವಣ್ಣ. ಎನ್ನ ಸುಜ್ಞಾನವೆಂಬ ಹಸ್ತಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ. ಎನ್ನ ಸದ್ಭಾವವೆಂಬ ಹಸ್ತಕ್ಕೆ ಮಹಾಲಿಂಗವಾದಾತ ಬಸವಣ್ಣ. ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಸ್ವಾದಿಷ್ಠಾನಚಕ್ರದಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಮಣಿಪೂರಕಚಕ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಅನಾಹತಚಕ್ರದಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ವಿಶುದ್ಧಿ ಚಕ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಆಜ್ಞಾಚಕ್ರದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಬ್ರಹ್ಮರಂಧ್ರದಲ್ಲಿ ನಿಃಕಲಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಶಿಖಾಚಕ್ರದಲ್ಲಿ ಶೂನ್ಯಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಪಶ್ಚಿಮಚಕ್ರದಲ್ಲಿ ನಿರಂಜನಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ವದನಕ್ಕೆ ಓಂಕಾರವಾದಾತ ಬಸವಣ್ಣ. ಎನ್ನ ಬಲದ ಭುಜಕ್ಕೆ ನಕಾರವಾದಾತ ಬಸವಣ್ಣ. ಎನ್ನ ಎಡದ ಭುಜಕ್ಕೆ ಮಕಾರವಾದಾತ ಬಸವಣ್ಣ. ಎನ್ನ ಒಡಲಿಂಗೆ ಶಿಕಾರವಾದಾತ ಬಸವಣ್ಣ. ಎನ್ನ ಬಲದ ಪಾದಕ್ಕೆ ವಕಾರವಾದಾತ ಬಸವಣ್ಣ. ಎನ್ನ ಎಡದ ಪಾದಕ್ಕೆ ಯಕಾರವಾದಾತ ಬಸವಣ್ಣ. ಎನ್ನಾ ಆಪಾದಮಸ್ತಕ ಪರಿಯಂತರ ಮಂತ್ರರೂಪಕಸಂಬಂಧವಾದಾತ ಬಸವಣ್ಣ. ಎನ್ನ ನಾದಕ್ಕೆ ಆಕಾರವಾದಾತ ಬಸವಣ್ಣ. ಎನ್ನ ಬಿಂದುವಿಂಗೆ ಉಕಾರವಾದಾತ ಬಸವಣ್ಣ. ಎನ್ನ ಕಳೆಗೆ ಮಕಾರವಾದಾತ ಬಸವಣ್ಣ. ಎನ್ನ ರುಧಿರಕ್ಕೆ ನಕಾರವಾದಾತ ಬಸವಣ್ಣ. ಎನ್ನ ಮಾಂಸಕ್ಕೆ ಮಕಾರವಾದಾತ ಬಸವಣ್ಣ. ಎನ್ನ ಮೇಧಸ್ಸಿಂಗೆ ಶಿಕಾರವಾದಾತ ಬಸವಣ್ಣ. ಎನ್ನ ಅಸ್ಥಿಗೆ ವಕಾರವಾದಾತ ಬಸವಣ್ಣ. ಎನ್ನ ಮಜ್ಜೆಗೆ ಯಕಾರವಾದಾತ ಬಸವಣ್ಣ. ಎನ್ನ ಸರ್ವಾಂಗಕ್ಕೆ ಓಂಕಾರವಾದಾತ ಬಸವಣ್ಣ. ಇಂತು ಬಸವಣ್ಣನೆ ಪರಿಪೂರ್ಣನಾಗಿ, ಬಸವಣ್ಣನೆ ಪ್ರಾಣವಾಗಿ, ಬಸವಣ್ಣನೆ ಅಂಗವಾಗಿ, ಬಸವಣ್ಣನೆ ಲಿಂಗವಾದ ಕಾರಣ, ನಾನು ಬಸವಣ್ಣಾ ಬಸವಣ್ಣಾ ಬಸವಣ್ಣಾ ಎಂದು ಬಯಲಾದೆನು ಕಾಣಾ, ಕಲಿದೇವರದೇವ.