Index   ವಚನ - 127    Search  
 
ಕಾಳಿಕಾದೇವಿ ಚಾಮುಂಡಿ ಗೌರಿ ಬನದಶಂಕರಿ. ಇಂತೀ ನಾಲ್ಕು ಶಕ್ತಿಯರು ಮೊದಲಾದ ಹಲವು ಶಕ್ತಿದೈವಂಗಳನಾರಾಧಿಸಿ, ಅವರೆಂಜಲ ಭುಂಜಿಸುವವರಿಗೆ ಗುರುವಿಲ್ಲ, ಗುರುಪ್ರಸಾದವಿಲ್ಲ. ಲಿಂಗವಿಲ್ಲ, ಲಿಂಗಪ್ರಸಾದವಿಲ್ಲ. ಜಂಗಮವಿಲ್ಲ, ಜಂಗಮಪ್ರಸಾದವಿಲ್ಲ. ಇಂತಪ್ಪ ಪಾತಕರಿಗೆ ಸೂರ್ಯಚಂದ್ರರುಳ್ಳನಕ್ಕ ಇಪ್ಪತ್ತೆಂಟುಕೋಟಿ ನಾಯಕನರಕ ತಪ್ಪದು. ಆ ನರಕ ತೀರಿದ ಬಳಿಕ, ಶ್ವಾನ ಸೂಕರ ಯೋನಿಯಲ್ಲಿ ಬಪ್ಪುದು ತಪ್ಪುದು. ಆ ಜನ್ಮ ತೀರಿದ ಬಳಿಕ, ರುದ್ರಪ್ರಳಯ ಪರಿಯಂತರ ನರಕ ತಪ್ಪದೆಂದ, ಕಲಿದೇವಯ್ಯ.