Index   ವಚನ - 158    Search  
 
ಗುರು ಸ್ವಾಯುತವಾಯಿತ್ತು, ಎಂಟು ಭಾವ ಸ್ವಾಯುತವಾಯಿತ್ತು. ಹದಿನಾರುತೆರನ ಭಕ್ತಿ ಸ್ವಾಯುತವಾಯಿತ್ತು. ಅಷ್ಟವಿಧಾರ್ಚನೆ ಸ್ವಾಯುತವಾಯಿತ್ತು. ತ್ರಿವಿಧದ ಅರಿವು ಸ್ವಾಯುತವಾಯಿತ್ತು. ಮಹಾಲಿಂಗದ ನಿಲವು, ಮಹಾಜಂಗಮದ ನಿಜವು ಸ್ವಾಯುತವಾಯಿತ್ತು. ಶುದ್ಧ ಪ್ರಸಾದ ತನು ಸ್ವಾಯುತವಾಯಿತ್ತು. ಸಿದ್ಧಪ್ರಸಾದ ಚೈತನ್ಯ ಸ್ವಾಯುತವಾಯಿತ್ತು. ಪ್ರಸಿದ್ಧಪ್ರಸಾದ ಮನ ಸ್ವಾಯುತವಾಯಿತ್ತು. ವಾಮಭಾಗದಲ್ಲಿ ಮಹವು ಉದಯವಾಯಿತ್ತು. ನಿಜಸ್ಥಾನದಲ್ಲಿ ನಿಂದಿತ್ತು, ಕ್ಷೀರಸ್ಥಾನದಲ್ಲಿ ಸಾರಾಯವಾಯಿತ್ತು. ಅನುಭಾವದಲ್ಲಿ ಘನಾಗಮವೆನಿಸಿತ್ತು. ಸ್ವಾನುಭಾವದಲ್ಲಿ ನಿಮ್ಮ ಬಸವಣ್ಣಂಗೆ ಶರಣೆಂದಿತ್ತು. ನೆಮ್ಮುಗೆವಿಡಿದು ಬಸವಣ್ಣನ ಪ್ರಸಾದವ ಕೊಂಡಿತ್ತು. ನಿಮ್ಮ ಬಸವಣ್ಣನ ಪ್ರಸಾದದಿಂದ ಇಂತಹ ಘನ ಸ್ವಾಯುತವಾಯಿತ್ತು. ನೀವು ಬಸವಣ್ಣನಿಂದಾದಿರಾಗಿ, ಬಸವಣ್ಣಂಗೆ ನಮೋ ನಮೋ ಎನುತಿರ್ದೆನು ಕಾಣಾ, ಕಲಿದೇವರದೇವಾ.