Index   ವಚನ - 184    Search  
 
ತಾ ಗುರುಲಿಂಗಜಂಗಮದ ಪಾದಕ್ಕೆರಗಿ ಲೀಯವಾದ ಬಳಿಕ, ಇದು ಚಿಹ್ನೆ ನೋಡಯ್ಯಾ. ಗುರುಲಿಂಗಜಂಗಮದ ಪಾದವೆ ತನ್ನ ಸರ್ವಾಂಗದಲ್ಲಿ ಅಚ್ಚೊತ್ತಿದಂತಾಯಿತ್ತಾಗಿ, ಅಲ್ಲಿಯೆ ಪಾದಾರ್ಚನೆ, ಅಲ್ಲಿಯೆ ಪಾದೋದಕ ಸೇವನೆ. ಬೇರೆ ಪೃಥಕ್ ಎಂಬುದಿಲ್ಲಯ್ಯ. ಅದೆಂತೆಂದಡೆ: ಪರಮಗುರುಲಿಂಗಜಂಗಮದ ಸಂಬಂಧ ಸಮರತಿಯ ಸೋಂಕಿನಲ್ಲಿ, ಪರಮಾನಂದಜಲವೆ ಪ್ರವಾಹವಾಗಿ, ಸರ್ವಾಂಗದಲ್ಲಿ ಪುಳಕವಾಗಿ ಹರಿವುತ್ತಿರಲು, ಆ ಪರಮಸುಖಸೇವನೆಯ ಮಾಡುವಲ್ಲಿ, ಪಾದೋದಕ ಸೇವನೆಯೆನಿಸಿತ್ತಯ್ಯ. ಈ ಪರಮಾಮೃತದ ತೃಪ್ತಿ ಬಸವಣ್ಣಂಗಾಯಿತ್ತು. ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನಯ್ಯಾ, ಕಲಿದೇವಯ್ಯ.