Index   ವಚನ - 195    Search  
 
ದೇವರು ಮುಂತಾಗಿ ನಡೆ, ದೇವರು ಮುಂತಾಗಿ ನುಡಿ. ದೇವರು ಮುಂತಾಗಿ ಅನುಭಾವಿಸಬಲ್ಲಡೆ, ದೇವ ಬ್ರಾಹ್ಮಣರೆನಿಸಿಕೊಂಡಡೆ ದೇವರು ಮೆಚ್ಚುವನು. ದೇವ ದಾನವ ಮಾನವ ದೇವನ ಸುದ್ದಿಯನರಿಯದೆ, ವಾದಿತನಕ್ಕೆ ಹೋರಿಹೋರಿ ನಾಯಸಾವ ಸತ್ತರು. ಗುರುಲಿಂಗ ಮುಂತಾಗಿ ನಡೆ, ಗುರುಲಿಂಗ ಮುಂತಾಗಿ ನುಡಿ. ಗುರುಲಿಂಗ ಮುಂತಾಗಿ ಅನುಭಾವಿಸಬಲ್ಲಡೆ ಗುರುವೆನಿಸಿಕೊಳಬೇಕು. ಗುರುಲಿಂಗವ ಹಿಂದು ಮಾಡಿ, ತಾ ಮುಂದಾಗಿ, ಗುರುದೇವನೆನಿಸಿಕೊಂಡಡೆ ಗುರು ತಾ ಮೆಚ್ಚುವನೆ ? ಗುರುಲಿಂಗಜಂಗಮದ ಪರಿಯವನರಿಯದೆ, ಸುರೆಯ ದೈವದ ಎಂಜಲ ಭುಂಜಿಸುವವರು, ತಾವು ಗುರುತನಕ್ಕೆ ಹೋರಿಹೋರಿ ನರಕದಲ್ಲಿ ಬಿದ್ದರು. ಭಕ್ತಿ ಮುಂತಾಗಿ ನಡೆ, ಭಕ್ತಿ ಮುಂತಾಗಿ ನುಡಿ. ಭಕ್ತಿ ಮುಂತಾಗಿ ನುಡಿಯ ಅನುಭಾವಿಸಬಲ್ಲಡೆ ಬಣಜಿಗನು ತಾ ಭಕ್ತನೆ? ಭಕ್ತಿಯಿಲ್ಲದ ವ್ಯರ್ಥಜೀವಿಗಳು ಭಕ್ತನ ಸರಿಯೆನಿಸಿಕೊಂಡಡೆ ಶಿವ ಮೆಚ್ಚುವನೆ? ಸತ್ಯಸದಾಚಾರದ ಹವನನರಿಯದೆ, ಮೃತ್ಯು ಮಾರಿಯ ಎಂಜಲ ತಿಂದು, ಮರ್ತ್ಯದಲ್ಲಿ ಹೋರಿಹೋರಿ ವ್ಯರ್ಥವಾಗಿ ಕೆಟ್ಟರು. ಶಿವಭಕ್ತನು ಗುರುದೇವ ನಮ್ಮ ಬ್ರಾಹ್ಮಣನು ಬಸವರಾಜದೇವರ ಸಂತತಿಗಲ್ಲದೆ ಮತ್ತಾರಿಗುಂಟು, ಕಲಿದೇವರದೇವಾ ?