Index   ವಚನ - 209    Search  
 
ನಾವು ಶಿವಭಕ್ತರೆಂದು ಹೇಳುವ ಅಣ್ಣಗಳಿರಾ ನೀವು ಶಿವಭಕ್ತರೆಂತಾದಿರಣ್ಣ. ಅರಿಯದಿರ್ದಡೆ ಕೇಳಿರಣ್ಣ, ಶಿವಭಕ್ತನಾದ ನೆಲೆಕಲೆಯ. ಆರು ವೈರಿಗಳ ಮುರಿಗಟ್ಟಿ, ಅಷ್ಟಮದವ ಜಳ್ಳು ಮಾಡಿ ತೂರಿ, ಸಪ್ತವ್ಯಸನಂಗಳ ಕಂಕಣವ ಮುರಿದು, ಸದ್ಭಕ್ತಿ ನೆಲೆಕಲೆಯ ತಿಳಿದು, ಅಷ್ಟಾವರಣದ ಗೊತ್ತು ಮುಟ್ಟಿನೋಡಿ, ಪಂಚಾಚಾರ ಭೇದವ ತಿಳಿದು, ಷಡ್ವಿಧಲಿಂಗಾಂಗದ ಮೂಲವನರಿದು, ಷಡ್ವಿಧ ಅರ್ಪಿತಾವಧಾನವನಾಚರಿಸಿ, ಷಟ್ಸ್ಥಲಮಾರ್ಗವಿಡಿದು ಆಚರಿಸುವ ಸದ್ಭಕ್ತರಿಗೆ ಅತಿಭೃತ್ಯರಾಗಿ, ಹಮ್ಮುಬಿಮ್ಮುಗಳಿಲ್ಲದೆ, ನಡೆನುಡಿಸಂಪನ್ನರಾದವರೆ ಶಿವಭಕ್ತರು ನೋಡಾ, ಕಲಿದೇವರದೇವ.