Index   ವಚನ - 249    Search  
 
ಬಿಂದುವ ಹರಿದೆಯಲ್ಲಾ ಬಸವಣ್ಣ. ನಾದವ ಸಿಂಹಾಸನವ ಮಾಡಿಕೊಂಡು ಇದ್ದೆಯಲ್ಲಾ ಬಸವಣ್ಣ. ಅಷ್ಟಗುಣಂಗಳ ನಷ್ಟವ ಮಾಡಿದೆಯಲ್ಲಾ ನಿಜಲಿಂಗ ಬಸವಣ್ಣ. ಶುಕ್ಲಶೋಣಿತ ಮೇಧಸ್ಸು ಇವರಿಂದಾದ ಕಾಯವೆತ್ತ ಹೋಯಿತ್ತಯ್ಯಾ ಘನಲಿಂಗ ಬಸವಣ್ಣ. ಭಕ್ತಿಯ ರೂಪುಗೆಟ್ಟು ಮತ್ತೊಂದು ರೂಪಾದೆಯಲ್ಲಾ ನಿರೂಪಿ ಬಸವಣ್ಣ. ಶೂನ್ಯಪ್ರಸಾದಿಯಲ್ಲ, ನಿಶ್ಯೂನ್ಯಪ್ರಸಾದಿಯಲ್ಲ. ಆವ ಪ್ರಸಾದವನೂ ಸೋಂಕದ ಪ್ರಸಾದಿ. ಯೋನಿಜನಲ್ಲದ, ಅಯೋನಿಜನಲ್ಲದ, ನಿಜಮೂರ್ತಿಯೆನಿಸುವ ಬಸವಣ್ಣ. ಭಕ್ತಿಯ ಹರಹಿಹೋದೆಯಲ್ಲಾ ಬಸವಣ್ಣ. ಮೂರ್ತನಲ್ಲದ, ಅಮೂರ್ತನಲ್ಲದ ಲಿಂಗವ ತೋರಿದೆಯಲ್ಲಾ ಬಸವಣ್ಣ. ನಿರವಯವಾಗಿ ಹೋದನು ನಮ್ಮ ಬಸವರಾಜನು. ಬೆಳಗನುಟ್ಟು ಬಯಲಾಗಿ ಹೋದನು ನಮ್ಮ ಬಸವಲಿಂಗನು. ಬಸವಣ್ಣ ಬಸವಣ್ಣ ಬಸವಣ್ಣ ಎನಲಮ್ಮೆನು, ಎನ್ನ ವಾಙ್ಮನಕ್ಕಗೋಚರನಾಗಿ. ಬಸವಣ್ಣಂಗೆ ಶರಣೆಂಬ ಪಥವ ತೋರಯ್ಯಾ, ಕಲಿದೇವರದೇವ.