Index   ವಚನ - 284    Search  
 
ಲಿಂಗಾಂಗಿಗಳೆಂದು ಒಪ್ಪವಿಟ್ಟು ನುಡಿದ ಅಣ್ಣಗಳಿರಾ ನೀವು ಲಿಂಗಾಂಗಿಗಳೆಂತಾದಿರಿ ಹೇಳಿರಣ್ಣ. ಅರಿಯದಿರ್ದಡೆ ಕೇಳಿರಣ್ಣ, ಅಂಗ ಲಿಂಗವಾದ ಭೇದವ. ಪರದೈವವ ನೆನೆಯದೆ, ಪರಸ್ತ್ರೀಯರ ಮುಟ್ಟದೆ, ಪರದ್ರವ್ಯವ ಅಪಹರಿಸದೆ, ಪರನಿಂದ್ಯವ ಮಾಡದೆ, ಪರಹಿಂಸೆಗೊಡಂಬಡದೆ, ಪರಪಾಕವ ಮುಟ್ಟದೆ, ಪರವಾದವ ಕಲ್ಪಿಸದೆ, ಪರಾತ್ಪರವಾದ ಸತ್ಯಶುದ್ಧ ಕಾಯಕವ ಮಾಡಿ, ನಿರ್ವಂಚಕತ್ವದಿಂದ ಗುರುಲಿಂಗಜಂಗಮಕ್ಕೆ ಸಮರ್ಪಿಸಿ, ಅವರಿಗೆ ಅತಿಭೃತ್ಯರಾಗಿ ಆಚರಿಸುವರೆ ಲಿಂಗಾಂಗಿಗಳು ನೋಡಾ, ಕಲಿದೇವರದೇವ.