Index   ವಚನ - 285    Search  
 
ಲಿಂಗೈಕ್ಯ ಲಿಂಗವಂತ ಲಿಂಗಪ್ರಾಣಿ ಪ್ರಾಣಲಿಂಗಿಗಳೆಂದೆನಬಹುದು.ಎನಬಹುದು ಉದಯಕಾಲ ಮಧ್ಯಾಹ್ನ ಕಾಲ ವಿಚಿತ್ರಕಾಲ ತ್ರಿಕಾಲ ಲಿಂಗಾರ್ಚಕರೆಂದೆನಬಹುದು, ಎನಬಹುದು. ಹೊನ್ನು ಹೆಣ್ಣು ಮಣ್ಣು ತ್ರಿವಿಧವ ತೋರಿದ ನಿಷ್ಪೃಹರೆಂದೆನಬುಹುದು, ಎನಬಹುದು. ಧಾರಣೆ ಪಾರಣೆ ಒಡಲ ದಂಡಣೆ ಕರಣ ದಂಡಣೆ ಉಳ್ಳವರೆಂದೆನಬಹುದು. ಶೀಲವಂತರು ಸಂಬಂಧಿಗಳು ಒರತೆಯಗ್ಘ[ವ]ಣಿಯ ನೇಮಿಗಳೆಂದೆನಬುಹುದು, ಎನಬಹುದು. ನೇಮ ವ್ರತ ಪಾಕದ್ರವ್ಯವ ಒಲ್ಲೆವೆಂದೆನಬಹುದು, ಎನಬಹುದು. ಶುದ್ಧಶೈವ ಪೂರ್ವಶೈವ ವೀರಶೈವವೆಂದೆನಬಹುದು, ಎನಬಹುದು. ಸರವೇದಿಗಳು ಶಬ್ದವೇದಿಗಳು ಮಹಾನುಭಾವಿಗಳೆಂದೆನಬಹುದು, ಎನಬಹುದು. ಇಂತಿವರೆಲ್ಲರೂ ಶಿವಪಥದೊಳಗೆ ಮಾಡುತ್ತ ಆಡುತ್ತ ಇದ್ದರಲ್ಲದೆ ಒಂದರ ಕುಳವು ತಿಳಿಯದು ನೋಡಾ. ಆ ಒಂದು ದಾಸೋಹದಲ್ಲಿ ಬಸವಣ್ಣ ಸ್ವತಂತ್ರ. ಆ ಲಿಂಗವು ಬಸವಣ್ಣನ ಒಡನೊಡನೆ ಆಡುತಿರ್ದನು ನೋಡಾ. ಇದು ಕಾರಣ,ಬಸವಣ್ಣ ನಡೆಪರುಷ. ಬಸವಣ್ಣ ನುಡಿ ಪರುಷ,ಬಸವಣ್ಣ ದೃಷ್ಟಿಪರುಷ. ಬಸವಣ್ಣ ಹಸ್ತ ಪರುಷ,ಬಸವಣ್ಣ ಮನ ಪರುಷ, ಬಸವಣ್ಣನ ಭಾವ ಪರುಷ, ತನು ಮನ ಧನ ಗುರು ಲಿಂಗ ಜಂಗಮಕ್ಕೆ ನಿವೇದಿಸಿದಾತ ಬಸವಣ್ಣ,ಅದು ಕಾರಣ ಅಂದಾದಿ ಇಂದಾದಿಯಾಗಿ, ಬಸವಣ್ಣ ನೆನೆವುದೆ ಲಿಂಗಾರ್ಚನೆ ಬಸವಣ್ಣ ನೆನೆವುದೆ ಜಂಗಮಾರ್ಚನೆ , ಬಸವಣ್ಣ ನೆನೆವುದೆ ಪರತತ್ವ, ಬಸವಣ್ಣ ನೆನೆವುದೆ ಪರಮಕಲ್ಯಾಣ, ಕಲಿದೇವಾ ನಿಮ್ಮ ಶರಣ ಬಸವಣ್ಣ ನೆನೆದು ಸಮಸ್ತ ಗಣಂಗಳೆಲ್ಲರೂ ಅತಿಶುದ್ಧರಾದರಯ್ಯ