Index   ವಚನ - 290    Search  
 
ವಿಭೂತಿಯನಿಟ್ಟು, ರುದ್ರಾಕ್ಷಿಯಂ ಧರಿಸಿ, ಪಂಚಾಕ್ಷರಿಯಂ ಜಪಿಸಿ, ಕೃತಾರ್ಥರಾದೆವೆಂಬ ಪಂಚಮಹಾಪಾತಕರು ನೀವು ಕೇಳಿರೊ. ಅದೆಂತಂದಡೆ : ವಿಭೂತಿಯನಿಟ್ಟು ವಿಶ್ವಾಸವಿಲ್ಲವಾಗಿ, ರುದ್ರಾಕ್ಷಿಯ ಧರಿಸಿ ರುದ್ರಗಣಂಗಳನರಿಯರಾಗಿ, ಪಂಚಾಕ್ಷರಿಯ ಜಪಿಸಿ ಪಂಚಮಹಾಪಾತಕವ ಬಿಡರಾಗಿ, ಅವಾವೆಂದಡೆ: ಹುಸಿ ಕೊಲೆ ಕಳವು ಪಾರದ್ವಾರ ತಾಮಸ ಭಕ್ತಸಂಗ, ಇಂತಿವ ಬಿಡದನ್ನಕ್ಕರ ಶಿವಭಕ್ತನೆನಿಸಿಕೊಳಬಾರದು ನೋಡಾ, ಅದೆಂತೆಂದಡೆ: ಸರ್ವಾಚಾರ ಪರಿಭ್ರಷ್ಟಃ ಶಿವಾಚಾರಸ್ಯ ಮೇಲನಮ್ | ಶಿವಾಚಾರ ಪರಿಭ್ರಷ್ಟೋ ನರಕೇ ಕಾಲಮಕ್ಷಯಮ್ || ಎಂದುದಾಗಿ. ಕಸಗೊಂಡ ಭೂಮಿಯಲ್ಲಿ ಸಸಿ ಪಲ್ಲವಿಸುವುದೆ? ಹುಸಿಯಿದ್ದಲ್ಲಿ ಶಿವಭಕ್ತಿ ನೆಲೆಗೊಂಬುದೆ? ಬಸವಗತಿಯೆನುತ ಹಿರಿದಾಗಿ ಭಸಿತವ ಪೂಸಿಕೊಂಡಿರ್ದ ಕುನ್ನಿಗಳೆಲ್ಲರೂ ಸದ್ಭಕ್ತರಾಗಬಲ್ಲರೆ? ಅಶನ ಭವಿಪಾಕ ತಿಂಬುದೆಲ್ಲವೂ ಅನ್ಯದ್ಯೆವದೆಂಜಲು. ಮತ್ತೆ ಮರಳಿ ವ್ಯಸನಕ್ಕೆ ದಾಸಿ ವೇಸಿ ಹೊಲತಿ ಮಾದಗಿತ್ತಿ ಡೊಂಬತಿ ಮೊದಲಾದವರಿಗೆ ಹೇಸದೆ ಆಶೆಯ ಮಾಡುವವರ ಭಕ್ತಿಯ ತೆರನೆಂತೆಂದಡೆ: ಸೂಕರನ ದೇಹವ ತೊಳೆದಡೆ, ಅದು ಕೂಡೆ ಅಶುದ್ಧದೊಳಗೆ ಹೊರಳಿದ ತೆರನಾಯಿತ್ತೆಂದ, ಕಲಿದೇವರದೇವ.