Index   ವಚನ - 292    Search  
 
ವಿಷ್ಣು ದೇವರೆಂದು ಆರಾಧಿಸುವಿರಿ ವಿಷ್ಣು ದೇವರಾದಡೆ ತಾನೇರುವ ವಾಹನ ಗರುಡನಲ್ಲಿ ಉತ್ತಿ ಉಣ್ಣಬಾರದೆ ಅಯ್ಯಾ. ಬ್ರಹ್ಮ ದೇವರೆಂದು ಆರಾಧಿಸುವಿರಿ, ಬ್ರಹ್ಮ ದೇವರಾದಡೆ ತಾನೇರುವ ವಾಹನ ಹಂಸೆಯಲ್ಲಿ ಉತ್ತಿ ಉಣ್ಣಬಾರದೆ ಅಯ್ಯಾ. ಮೈಲಾರ ದೇವರೆಂದು ಆರಾಧಿಸುವಿರಿ, ಮೈಲಾರ ದೇವರಾದಡೆ ತಾನೇರುವ ವಾಹನ ಕುದುರೆಯಲ್ಲಿ ಉತ್ತಿ ಉಣ್ಣಬಾರದೆ ಅಯ್ಯಾ. ಭೈರವನೆ ದೇವರೆಂದು ಆರಾಧಿಸುವಿರಿ, ಭೈರವನೆ ದೇವರಾದಡೆ ತಾನೇರುವ ವಾಹನ ಚೇಳಿನಲ್ಲಿ ಉತ್ತಿ ಉಣ್ಣಬಾರದೆ ಅಯ್ಯಾ. ಇದು ಕಾರಣ, ನಾಗಲೋಕದ ನಾಗಗಣಂಗಳು ಕೊಂಬುದು, ಬಸವಣ್ಣನ ಪ್ರಸಾದ. ಮರ್ತ್ಯಲೋಕದ ಮಹಾಗಣಂಗಳು ಕೊಂಬುದು ಬಸವಣ್ಣನ ಪ್ರಸಾದ. ದೇವಲೋಕದ ದೇವಗಣಂಗಳು ಕೊಂಬುದು ಬಸವಣ್ಣನ ಪ್ರಸಾದ. ಇಂತೀ ನಮ್ಮ ಬಸವಣ್ಣನ ಪ್ರಸಾದ ಉಂಬುತ್ತ ಉಡುತ್ತ, ಕೊಂಬುತ್ತ ಕೊಡುತ್ತ, ಅನ್ಯದೈವಕ್ಕೆರಗಿ ಆರಾಧಿಸುವ ಕುನ್ನಿಗಳನೆನ್ನ ಮುಖಕ್ಕೆ ತೋರದಿರಯ್ಯಾ, ಕಲಿದೇವರದೇವಯ್ಯ ನಿಮ್ಮ ಧರ್ಮ