Index   ವಚನ - 300    Search  
 
ಶಬ್ದ ಸ್ಪರ್ಶ ರೂಪು ರಸ ಗಂಧ ಪಂಚವಿಷಯ ಸಂಗತವಾವುದೆಂದಡೆ: ಶಬ್ದ ಗುರು, ಸ್ಪರ್ಶ ಲಿಂಗ, ರೂಪುಜಂಗಮ, ರಸಪ್ರಸಾದ, ಗಂಧ ಅನುಭಾವ. ಇಂತೀ ಪಂಚವಿಂಶತಿಯವನಲ್ಲವೆನಬಲ್ಲನಾಗಿ ಬಸವಣ್ಣನು. ಮನ ಬುದ್ಧಿ ಚಿತ್ತ ಅಹಂಕಾರ ಚತುರ್ವಿಧ ಸ್ಥೂಲವಾವುದೆಂದಡೆ: ಮನ ಧ್ಯಾನ ಬುದ್ಧಿ ವಂಚನೆ ಇಲ್ಲದುದು. ಚಿತ್ತ ದಾಸೋಹ ಅಹಂಕಾರ ಜ್ಞಾನ ಇವರಲ್ಲಿ ಮಾಡಬಲ್ಲನಾಗಿ ಬಸವಣ್ಣನು. ಸತ್ವ ರಜ ತಮವೆಂಬೀ ತ್ರಿಕರಣವಾವುದೆಂದಡೆ: ಸತ್ವಶುದ್ಧ ರಜಸಿದ್ಧ ತಮಪ್ರಸಿದ್ಧ. ಇಂತೀ ತ್ರಿವಿಧ ಸನ್ನಿಹಿತನಾಗಿ ಬಸವಣ್ಣನು. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವಾವುದೆಂದಡೆ: ಕಾಮ ಪೂಜೆ, ಕ್ರೋಧ ಅನಿಮಿಷ, ಲೋಭ ಭಕ್ತಿ, ಮೋಹ ಅಷ್ಟವಿಧಾರ್ಚನೆ, ಮದ ಷೋಡಶೋಪಚಾರ ಮತ್ಸರ ಭವಂ ನಾಸ್ತಿ ಎಂದೆನಬಲ್ಲನಾಗಿ ಬಸವಣ್ಣನು, ಮಹಾದೇವನು ಬಸವಣ್ಣನು, ಮಹಾಲಿಂಗವು ಬಸವಣ್ಣಂಗೆ ಮತ್ತೇನು ಅಪ್ರತಿಮ ಕಾಣಾ, ಕಲಿದೇವಯ್ಯ.