Index   ವಚನ - 304    Search  
 
ಶರೀರ ತಾ ಮುನ್ನ ಮರಹು, ಶರೀರ ಅವಧಾನ ತಾ ಮುನ್ನ ಮರಹು. ಮನ ತಾ ಮುನ್ನವೆ ಮರಹು. ಮನವೆಂಬ ಮರ್ಕಟನ ಮರವೆಯ ನೆನಹು ತಾ ಮುಂದೆ ಮರಹು. ಮನದಾಳಾಪನೆ ತಾ ಮುನ್ನವೆ ಮರಹು. ಮನಶರೀರ ಭಾವಂಗಳನರಿದು ನೋಡಾ, ತಿಳಿದು ನೋಡಾ ಎಚ್ಚೆತ್ತು ನೋಡಾ. ಸತ್ಯನಿತ್ಯ ಶಬ್ದನಿತ್ಯ ಊಧ್ರ್ವಮುಖದಲ್ಲಿ ಉತ್ಪತ್ಯವ ಮಾಡುವೆನೆಂದು, ಕರುಣೆ ನಿತ್ಯಸಿಂಹಾಸನದ ಮೇಲೆ ದಯವನೆ ಚರಣವ ಮಾಡಿ, ಮೂರ್ತಗೊಂಡು ಕಾರುಣ್ಯದಿಂ ನೋಡಿದ ಶಿವನು. ಉದಯಕಾಲ ವಿನೋದಕಾಲ ಶಿವನನು, ಮಹಾದಯವನು ಬೇಡುವ ಬನ್ನಿರಯ್ಯಾ. ಮನದಲ್ಲಿ ದಾಸೋಹ ಪರಿಪೂರ್ಣವಾಗಿ, ದಾಸೋಹವ ಬೇಡುವ ಬನ್ನಿರಯ್ಯಾ. ಸಂಸಾರಸಾಗರದೊಳದ್ದಿ ಹೋದರೆಂದು, ಮಾಯೆಯೆಂಬ ಕಾಲನು ಬಿನ್ನಹಂ ಮಾಡಿದನು. ಬ್ರಹ್ಮನರ್ಥ ವಿಷ್ಣುವರ್ಥ ರುದ್ರಾದಿಗಳರ್ಥ ವೇದಶಾಸ್ತ್ರಾಗಮಪುರಾಣಂಗಳರ್ಥ. ಸಪ್ತಕೋಟಿ ಮಹಾಮಂತ್ರಂಗಳರ್ಥ ದೇವಾದಿದೇವಂಗಳರ್ಥ. ವೇದಮಂತ್ರವಿಡಿದು ಪ್ರಾಣಘಾತಕರಾಗಿ ದ್ವಿಜರೆಲ್ಲ ಅದ್ದಿಹೋದರೆಂದು, ಮಾಯೆಯೆಂಬ ಕಾಲನು ಎಲ್ಲರ ಹಿಂದೆ ಇಕ್ಕಿಕೊಂಡು, ಶಿವಂಗೆ ಬಿನ್ನಹಂ ಮಾಡುವಲ್ಲಿ, ಗಣಂಗಳು ಅದ್ದಿಹೋದು ದುಂಟೆಯೆಂದು, ನಂದಿಕೇಶ್ವರದೇವರು ಬೆಸಗೊಂಡರು. ಆ ನಿರೂಪಕ್ಕೆ ಮಾಯೆಯೆಂಬ ಕಾಲನು ಕರ್ಣವ ಮುಚ್ಚಿ, ಸ್ವಯಸ್ವಹಸ್ತಂಗಳಂ ಮುಗಿದು, ಹೀಗೆಂದು ನಿರೂಪವ ಕರುಣಿಸಿಕೊಡುವರೆ ದೇವಯೆಂದು, ಎನ್ನ ನಿರ್ಮಿಸಿದವರಾರು? ತ್ರಿಭುವನಂಗಳ ಮಾಡಿದವರಾರು? ಗಣಂಗಳದ್ದಿಹೋದುದುಂಟೆ ದೇವ? ಯಂತ್ರವಾಹಕ ನೀನು, ಸಕಲಪಾವಕ ನೀನು. ನಿತ್ಯಭಕ್ತರು ನಿತ್ಯರು, ನಿಮ್ಮ ಗಣಂಗಳು ದಯಾಪಾರಿಗಳು. ನಿಮ್ಮ ಶರಣರ ನೆನಹಿಂದ, ಸಮಸ್ತಲೋಕದವರುಗಳಿಗೆ ಚೈತನ್ಯಾತ್ಮವಹುದು. ಅವಧಾರವಧಾರೆಂದು ಬಿನ್ನಹಂ ಮಾಡಿ, ಮತ್ತೆ ಕಾಲನು ನಿತ್ಯಸಿಂಹಾಸನದ ಮೇಲೆ ಕುಳಿತಿರ್ದು, ಭಕ್ತಿನಿತ್ಯ ದಾಸೋಹವಂ ಮಾಡಲಿಕೆ ಕರ್ಮವೆಲ್ಲಿಯದು. ಮಹಾದಾನಿ ಕರುಣವಿಡಿದೆತ್ತಿದಿರೆನುತ ತಿರುಗಿದನು ತನ್ನವರು ಸಹಿತಿತ್ತ. ಅತ್ತ ಮಹಾಸಂಪಾದನೆಯಲ್ಲಿ ಶರಣ ಬಸವಣ್ಣನಿಗೆ ಶರಣೆನುತಿರ್ದೆ ಕಾಣಾ, ಕಲಿದೇವರದೇವ.