Index   ವಚನ - 315    Search  
 
ಸತ್ಯಸದ್ಭಕ್ತಿಸದಾಚಾರ ಸತ್ಕ್ರಿಯ ಸಮ್ಯಗ್‍ಜ್ಞಾನ ಸದ್ವರ್ತನೆ ಸದ್ಭಾವ ಷಟ್ಸ್ಥಲಮಾರ್ಗಸದ್ಭಕ್ತ ಮಾಹೇಶ್ವರಶರಣಗಣಂಗಳು ಸದಾವಾಸ ಪರಿಯಂತರ ನೀಚಾಶ್ರಯಗಳ ಹೊದ್ದಲಾಗದು. ಅದೆಂತೆಂದಡೆ, ಈಚಲಮರದಿಂದ ಮನೆಯ ಕಟ್ಟಲಾಗದು. ಆ ಗಿಡದ ನೆರಳಲ್ಲಿ ಅರ್ಚನೆ ಅರ್ಪಣ ಶಯನ ಆಸನ ಮೊದಲಾದ ಕೃತ್ಯಗಳ ಮಾಡಲಾಗದು. ಪಾಕವ ಮಾಡುವಲ್ಲಿ ಅದರ ಕಾಷ್ಠದಲ್ಲಿ ಅಡಿಗೆಯ ಮಾಡಲಾಗದು. ಅಣಬೆ ಇಂಗು ಹಾಕಿ ಭವಿಜನ್ಮಾತ್ಮರ ದರ್ಶನ ಸ್ಪರ್ಶನ ಸಂಭಾಷಣೆಯಿಂದ ಪಾಕವ ಮಾಡಲಾಗದು. ತಥಾಪಿಸಿ ಮಾಡಿದ ಪಾಕವ ಶರಣಗಣಂಗಳು ಲಿಂಗಾರ್ಪಿತವ ಮಾಡಲಾಗದು. ಲಿಂಗಬಾಹ್ಯರು ಆಚಾರಭ್ರಷ್ಟರು ಭವಿಸಂಪರ್ಕರು ಗುರುಲಿಂಗಜಂಗಮದ್ರೋಹಿಗಳು ಮೊದಲಾದವರ ಸಮ್ಮುಖದಲ್ಲಿ ಅರ್ಚನೆ ಅರ್ಪಣಕ್ರಿಯೆಗಳ ಮಾಡಲಾಗದು. ಅವರು ಮಾಡಿದ ಪಾಕವ ಪರಶಿವಲಿಂಗಕ್ಕೆ ಅರ್ಪಿಸಲಾಗದು. ಪಾದೋದಕಪ್ರಸಾದದ್ರೋಹಿಗಳ ಸಮಪಂಕ್ತಿಯ ಮಾಡಲಾಗದು. ಅವರಾರಾರೆಂದಡೆ, ಗಣಸಮೂಹದಲ್ಲಿ ಪ್ರಸಾದವ ಕೈಕೊಂಡು, ಸಾವಧಾನ ಭಕ್ತಿಯಿಂದ ಮುಗಿದು, ತಾನೊಬ್ಬನೆ ಏಕಾಂತವಾಸದಲ್ಲಿ ಸಾವಧಾನ ಭಕ್ತಿಯನುಳಿದು, ಲಿಂಗಕ್ಕೆ ಕೊಡದೆ, ತನ್ನ ಅಂಗವಿಕಾರದಿಂದ, ಮನಬಂದಂತೆ ಸೂಸಾಡಿ ಭುಂಜಿಸುವನೊಬ್ಬ ಪಾದೋದಕಪ್ರಸಾದದ್ರೋಹಿ. ಸಮಪಂಕ್ತಿಯಲ್ಲಿ ತನ್ನ ಅಂಗವಿಕಾರದಿಂದ ನನಗೆ ಓಗರವಾಯಿತ್ತೆಂದು, ಪ್ರಸಾದಿಸ್ಥಲಹೀನರ ಕರೆದು ಕೊಡುವನೊಬ್ಬ ಪಾದೋದಕಪ್ರಸಾದದ್ರೋಹಿ. ತಾ ಮುಗಿದ ಸಮಯದಲ್ಲಿ ಮಧುರ ಒಗರು ಕಾರ ಹುಳಿ ಕಹಿ ಅತಿಯಾಸೆಯಿಂದ ನೀಡಿಸಿಕೊಂಡು, ಜಿಗುಪ್ಸೆ ಹುಟ್ಟಿ, ಕಡೆಗೆ ಬಿಸುಟನೊಬ್ಬ ಪಾದೋದಕ ಪ್ರಸಾದದ್ರೋಹಿ. ಗುರುಲಿಂಗಜಂಗಮದಿಂದ ಪಾದೋದಕಪ್ರಣಮ ಪ್ರಸಾದಪ್ರಣಮವ ಪಡೆದು, ಮತ್ತಾ ಗುರುಲಿಂಗಜಂಗಮನಿಂದೆಯ ಮಾಡುವನೊಬ್ಬ ಪಾದೋದಕಪ್ರಸಾದದ್ರೋಹಿ. ಇಂತಪ್ಪ ಪರಮದ್ರೋಹಿಗಳ ದರ್ಶನದಿಂದ ಪಾದಾರ್ಚನೆ ಅರ್ಪಣಗಳ ಮಾಡಲಾಗದು ನೋಡಾ, ಕಲಿದೇವರದೇವ.