ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣನೆಂದೆಂಬರು.
ನಾನದ ಮನದಲ್ಲಿ ಹಿಡಿದು ಮಾತಾಡುವೆನಲ್ಲದೆ ಕ್ರೀಯಿಂದ ಕಾಣೆ.
ಸತ್ತೆ ಗುರು, ಚಿತ್ತೆ ಲಿಂಗ, ಆನಂದವೆ ಜಂಗಮ.
ನಿತ್ಯವೆ ಪ್ರಸಾದ, ಪರಿಪೂರ್ಣವೆ ಪಾದೋಕವೆಂಬುದನವಗ್ರಹಿಸಿ ನಿಂದು,
ಜಂಗಮಕ್ಕೆ ಭಕ್ತನಾದೆನಯ್ಯಾ.
ನಿತ್ಯನಾಗಿ ನಿಮ್ಮ ಜಂಗಮಕ್ಕೆ ವಂದಿಸುವೆ.
ಆನಂದದಿಂದ ನಿಮ್ಮ ಜಂಗಮದ ಪಾದೋದಕವ ಕೊಂಬೆ.
ಪರಿಪೂರ್ಣನಾಗಿ ನಿಮ್ಮನರ್ಚಿಸಿ ಪೂಜಿಸಿ ಪರವಶನಪ್ಪೆ ನಾನು.
ಭಕ್ತಿಪ್ರಸಾದ ಮುಕ್ತಿಪ್ರಸಾದ ನಿತ್ಯಪ್ರಸಾದವ
ನಿಮ್ಮ ಜಂಗಮದಲ್ಲಿ ವರವ ಪಡೆದು,
ಕಲಿದೇವರದೇವಾ, ನಿಮ್ಮ ಶರಣ ಪ್ರಭುದೇವರ
ಶ್ರೀಪಾದದಲ್ಲಿ ಮನಮಗ್ನನಾಗಿರ್ದೆನಯ್ಯ.
Art
Manuscript
Music
Courtesy:
Transliteration
Sattu cittu ānanda nityaparipūrṇanendembaru.
Nānada manadalli hiḍidu mātāḍuvenallade krīyinda kāṇe.
Satte guru, citte liṅga, ānandave jaṅgama.
Nityave prasāda, paripūrṇave pādōkavembudanavagrahisi nindu,
jaṅgamakke bhaktanādenayyā.
Nityanāgi nim'ma jaṅgamakke vandisuve.
Ānandadinda nim'ma jaṅgamada pādōdakava kombe.
Paripūrṇanāgi nim'manarcisi pūjisi paravaśanappe nānu.
Bhaktiprasāda muktiprasāda nityaprasādava
nim'ma jaṅgamadalli varava paḍedu,
kalidēvaradēvā, nim'ma śaraṇa prabhudēvara
śrīpādadalli manamagnanāgirdenayya.