Index   ವಚನ - 327    Search  
 
ಸ್ಥಾವರಲಿಂಗ ಜಂಗಮವೆಂಬುದನಾರು ಬಲ್ಲರಯ್ಯಾ, ಬಸವಣ್ಣನಲ್ಲದೆ? ಎಲ್ಲಿ ಸ್ಥಾವರವಿದ್ದಲ್ಲಿ ನೋಡಲಾಗದು, ಮನದಲ್ಲಿ ನೆನೆಯಲಾಗದು. ಲಿಂಗಕ್ಕಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಲಿಂಗವುಂಟೆ? ಗುರುವಿಂಗಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಗುರುವುಂಟೆ? ಎಲ್ಲಿ ಜಂಗಮವಿದ್ದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಅನುಭಾವ ಸನ್ನಹಿತವಾಗಿಹುದು. ಇಂತಿವರ ಭೇದವ ಬಸವಣ್ಣ ಬಲ್ಲನು. ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯೊಳೆದ್ದು, ನಮೋ ನಮೋ ಎಂಬೆನು ಕಾಣಾ, ಕಲಿದೇವಯ್ಯ.