Index   ವಚನ - 30    Search  
 
ಬೈಲ ಬ್ರಹ್ಮವು ತನ್ನ ಬೈಲಿನೊಳಗೆ ತಾನೆ ಬೈಲುರೂಪವಾಗಿ ಬೈಲಾದುದು ತಾನೆ |ಪಲ್ಲ| ಜಾರನೋರ್ವಗೆ ಸುತರು ನೂರೆಂಟು ಹುಟ್ಟಿಹರು ಚೋರತನಕ್ಕೆ ಬಿದ್ದು ಹೋರುವ ತಾನೆ ಚೋರತನಕೆ ಬಿದ್ದು ಹೋರುವ ಮಕ್ಕಳ ಜಾರ ತಾ ಕೊಂದು ಅಳಿವನು ತಾನೆ. | 1 | ಪುಂಡಪುಂಡರು ಕೂಡಿ ದಂಡೆತ್ತಿ ಬರುವರು ಕಂಡಕಂಡ್ಹಂಗೆ ಕಡಿದಾಡಿ ತಾನೆ. ಕಂಡಕಂಡ್ಹಂಗೆ ಕಡಿದಾಡಿ ಆ ದಂಡು ಬಂಡಾಟವಾಗಿ ಹೋಗುದು ತಾನೆ. | 2 | ಇರವಿಯ ದಂಡೆದ್ದು ಧರೆಯೆಲ್ಲ ಮುತ್ತುವುದು ನರರಿರುವುದಕ್ಕೆ ನೆಲೆಯಿಲ್ಲ ತಾನೆ. ನರರಿರುವುದಕ್ಕೆ ನೆಲೆಯಿಲ್ಲದಂತಾಗಿ ಧರೆ ಉರಿದಿರಿವಿ ಅಳಿವುದು ತಾನೆ. | 3 | ಇದ್ದ ದೈವಗಳೆಲ್ಲ ಬಿದ್ದುರುಳಿ ಹೋದಾವು ಸುದ್ದಿ ಕೇಳೋರ್ವ ಬರುವನು ತಾನೆ ಸುದ್ದಿ ಕೇಳೋರ್ವ ಬಂದು ತಾ ಮಾಡಿದ ಬುದ್ಧಿಂದ ಸೀಮಾ ನೇಮವು ತಾನೆ. | 4 | ಮಾಡಿದ ನೇಮ ಸೀಮಾ ಮಾಡಿದಂತಿರದೆ ತಾ ಕೂಡೋದು ಜಾತಿಸಂಕರ ತಾನೆ ಕೂಡೋದು ಜಾತಿಸಂಕರವಾಗಲು ರೂಢಿಯೊಳಗೆ ಮಹಾಶ್ಚರ್ಯವು ತಾನೆ. | 5 | ಹಿಂದೆ ಬಸವರಾಜ ಬಂದು ತೋರಿದ ಮಹತ್ವಕ್ಕೆ ಅಂದೇ ಆಯಿತು ವಿಘ್ನ ಪ್ರಮಥರಿಗೆ ತಾನೆ ಅಂದಾದ ವಿಘ್ನಕ್ಕೆ ಪ್ರಮಥರು ತಾವೆಲ್ಲಾ ಮುಂದಾಗುವದು ಸೂಚಿಸಿದರು ತಾನೆ. | 6 | ಮುಂದಾದುದು ತಾನೆ ಮುಂದೇನಾಗುವದು ಅದ ರಂದವ ಅರಿಯದೆ ಉಳುವಿಟ್ಟರು ತಾನೆ ಅಂದವರಿಯದೆ ತಾವು ಉಳುವಿಟ್ಟು ಹೋದ ಕಾರಣ ಬಂದುಹೋಗುವದು ಭವವುಂಟು ತಾನೆ. | 7 | ಚನ್ನಣ್ಣ ಬರುವದು ಬಿನ್ನಣ ಮುಂದುಂಟು ಚನ್ನಣ್ಣನಿಂದೇನಾಗುವದು ತಾನೆ ಚನ್ನಣ್ಣನಿಂದೇನಾಗದಿರಲು ಆಗ ತನ್ನ ತಾ ತಿಳಿದು ನಿಜವಹ ತಾನೆ. | 8 | ಆರು ಕೂಡಿಸಿದರೆ ಕೂಡದು ಆರು ಅಗಲಿಸಿದರೆ ಅಗಲದು ಆರಿಗೆ ಆರಾಗಿ ಮೀರುವದು ತಾನೆ ಆರಿಗೆ ಆರಾಗಿ ಮೀರುವ ಮಾತಿಗೆ ಘೋರಾಟವಾಯಿತು ಬಹುಜನ್ಮ ತಾನೆ. | 9 | ಒಂದೊಂದು ಜೀವದಿಂದೆ ಮುಂದೊಮ್ಮೆ ಸರ್ವಜೀವವು ಹೊಂದಿ ಹೋಗುವದು ಲಯವಾಗಿ ತಾನೆ ಹೊಂದಿ ಹೋಗುವದು ಲಯವಾಗಿ ಅದರೊಳ್ ಬಂದುಳಿದು ಹಲವಾಗುವದು ತಾನೆ. | 10 | ನಿಷ್ಠೆ ನೆಲೆಗೊಳಿಸಿ ನಿಷ್ಠೆಯೊಳ್ ಅಳಿವರು ನಿಷ್ಠೆ ಉಳ್ಳವರು ನಿಜವಲ್ಲ ತಾನೆ ನಿಷ್ಠೆಯುಳ್ಳವರು ನಿಜವಲ್ಲ ಇದರಂತೆ ದುಷ್ಟರು ದುಷ್ಟರೊಳ್ ಅಳಿವರು ತಾನೆ. | 11 | ಅಳಿದದ್ದು ಅಳಿವುದು ಉಳಿದದ್ದು ಉಳಿವುದು ಇಳೆಯು ನೀರೊಳ್ ಕರಗುವದು ತಾನೆ ಇಳೆಯು ನೀರೊಳು ಕರಗಿದ ಕಾಲಕ್ಕೆ ಬಲವಂತನೊಬ್ಬನು ಬರುವನು ತಾನೆ. | 12 | ಬಲವಂತ ಬಂದಾಗ ನೆಲಜಲ ನೆಲಮಾಡಲು ಹಲವುಕಾಲ ಮತ್ತಾಗುವದು ತಾನೆ ಹಲವುಕಾಲ ಮತ್ತಾಗುವದು ಈ ಪರಿ ನೆಲೆಯೊಳಳಿವು ಸಾಕಾರಕ್ಕೆ ತಾನೆ. | 13 | ಆರಾರ ವ್ಯಾಳ್ಯಕ್ಕೆ ಮೀರುವದು ಈ ಭೂಮಿ ನೀರೊಳು ಕೂಡಿ ನೀರಾಗುವದು ತಾನೆ ನೀರೊಳು ಕೂಡಿ ನೀರಾಗಿರಲು ಆ ನೀರು ನೀರರ್ತು ಅಗ್ನಿ ಆಗುವದು ತಾನೆ. | 14 | ಅನಲಾನ ಉರಿನುಂಗಿ ಅನಿಲಾನ ಒಳಕೊಂಡು ಅನುವಾಯಿತು ಆಕಾಶ ಆತ್ಮನೊಳು ತಾನೆ ಅನುವಾಯಿತು ಆತ್ಮನೊಳು ಆಕಾಶ ಆ ಆತ್ಮ ಚಿನುಮಯನೊಳಗೆ ತನುಮಯ ತಾನೆ. | 15 | ಲೀಲವನುಳಿದು ತಾ ಲೀಲವಾಗಲು ಮಹಾಂತ ಮೂಲೋಕವೆಲ್ಲಾ ಸಾಲೋಕ್ಯ ತಾನೆ ಮೂಲೋಕವೆಲ್ಲಾ ಸಾಲೋಕ್ಯವೆಲ್ಲುಂಟು ಲೀಲ ಮೇಲಾಗಿ ತಾನಹನು ತಾನೆ. | 16 |