Index   ವಚನ - 33    Search  
 
ಒಂದು ರಾಷ್ಟ್ರದಲ್ಲಿ ಒಂಬತ್ತು ಅಗಸಿಯನುಳ್ಳ ಮೂರು ಸುತ್ತಿನಾ ಕೋಟಿಯ ಗಡಹವಿರ್ಪುದು. ಆ ಗಡಹವ ನೋಡ ಹೋಗಲು, ಆ ಗಡಹದ ನವದ್ವಾರವು ತೆರೆದಿರಲು, ಅಲ್ಲಿ ಒಳಹೊಕ್ಕು ನೋಡಲು ಎತ್ತ ನೋಡಿದರತ್ತ ವಜೀರ, ಉಮರಾವತ, ಅರಣ್ಯ, ಠಾಣ್ಯ ಮೊದಲಾದ ಅನಂತ ಪರಿವಾರ ಆರೈಸಿರುವದು. ಅಲ್ಲಿ ವೇದ ಆಗಮ ಪುರಾಣ ಮೊದಲಾದ ನೃತ್ಯ ಹಾಸ್ಯ ಗಾಯನ ಅನಂತ ಉತ್ಸಹವಿರ್ಪುದು. ಅಲ್ಲಿ ದೀವಟಿಗೆಯು ಬಿರಸು ಚಂದ್ರಜ್ಯೋತಿ ದೀಪ ಮೊದಲಾದ ಅನಂತ ಪ್ರಕಾಶವಿರ್ಪುದು. ಅಲ್ಲಿ ಭೇರಿ, ನಗಾರಿ, ತಮ್ಮಟೆ, ಕಾಳಿ, ಕರ್ಣಿ ಮೊದಲಾದ ಅನಂತ ನಾದವಿರ್ಪುದು. ಮತ್ತಲ್ಲಿ ಒಳಹೊಕ್ಕು ನೋಡಲು ಮುಂದೆ ಚಿತ್ರವಿಚಿತ್ರವಾದ ಮಂಟಪವಿರ್ಪುದು. ಆ ಮಂಟಪದ ಸುತ್ತ ಅರವಿಂದ ನೀಲೋತ್ಪಲ ಸಂಪಿಗಿ ಇರವಂತಿಗೆ ಶ್ಯಾವಂತಿಗಿ ಮೊಲ್ಲೆ ಮಲ್ಲಿಗಿ ಮೊದಲಾದ ಅನಂತ ಪುಷ್ಪಮಾಲೆಗಳಿರ್ಪುವು. ಬಹುವರ್ಣದ ರಂಗವಾಲಿಯ ನೆಲಗಟ್ಟಿರ್ಪುದು. ಅದರೊಳಗೆ ನೋಡಬೇಕೆಂದು ಹೋಗಲು ಮುಂದೆ ನವರತ್ನಖಚಿತವಾದ ಸಿಂಹಾಸನವಿರ್ಪುದು. ಆ ಸಿಂಹಾಸನದ ಮೇಲೆ ಅಧಿಪತಿಯಾಗಿ ಇರುವಾತ ಎಂಥಾತ ಆತನ ಆತುರದಿ ನೋಡಬೇಕೆಂದು ಆ ಸಿಂಹಾಸನವೇರಲು ಅಲ್ಲಿಯ ಅಧಿಪತಿ ತಾನೇ ಆಗಿರ್ದ. ಇದೇನು ಸೋಜಿಗವೋ, ತಾ ನೋಡ ಬಂದವನೆಂಬ ಅರವಿಲ್ಲ. ಅಲ್ಲಿ ಅರಸನ್ಯಾವನೆಂಬ ಸಂಶಯವಿಲ್ಲದೆ ಅಲ್ಲಿಯ ಸರ್ವಕ್ಕೆ ತಾನೇ ಅಧಿಪತಿಯಾಗಿ ಇದ್ದಾಗ್ಯೂ ಆವಾಗಲೂ ಅಲ್ಲೇ ಇರ್ದಂತೆ ಇರುತಿರ್ದೆನೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.