ಈ ಭುವನದಲ್ಲಿ ಐದು ಜೀನಸಿನ ಐದು ವೃಕ್ಷ.
ಆ ಐದು ವೃಕ್ಷಕ್ಕೆ ಐದೈದು ಜೀನಸಿನ ಐದೈದು ಶಾಖೆಗಳು.
ಆ ಐದೈದು ಶಾಖೆಗಳಿಗೆ ಐದೈದು ಅಡ್ಡ ಶಾಖೆಗಳು.
ಆ ಅಡ್ಡ ಶಾಖೆಗಳಿಗೆ ಅನಂತ ಜೀನಸಿನ ಅನಂತ ಎಲೆಗಳು.
ಇಂತಪ್ಪ ಐದು ವೃಕ್ಷಗಳ ಬುಡ ಕೊನಿ ಒಳಗ ಮಾಡಿಕೊಂಡು,
ಬುಡ ಕೊನಿ ಇಲ್ಲದ ಬಳ್ಳಿ ಆ ಆ ಜೀನಸಿಗೆ ತಾನು ಆ ಆ ಜೀನಸಾಗಿ
ಆ ಗಿಡಯೆಂಬ ಗುರ್ತು ತೋರಿದ ಹಾಗೆ ಮುಸುಕಿಟ್ಟಿಹುದು.
ಆ ಮುಸುಕಿಟ್ಟ ಬಳ್ಳಿಯ ಚಿಗುರೆಲೆಯನು ಹರಿಯದೆ,
ಆ ವೃಕ್ಷದ ಕೊನರು ಡೊಂಕಿಸದೆ
ಆ ಬುಡ ಕೊನಿಯಿಲ್ಲದ ಬಳ್ಳಿಯ ಕಡೆದೆಗೆದ ನಿಮ್ಮ ನಿಜಶರಣನು
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.