Index   ವಚನ - 39    Search  
 
ಶ್ರೀಮತ್ ಸಚ್ಚಿದಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪವೇ ಮಹಾಂತ ಅಖಂಡಪರಶಿವಬ್ರಹ್ಮದ ನಿಜಚಿದ್ವಿಲಾಸದೊಳಾದ ಬ್ರಹ್ಮಾಂಡಮಂಡಲಕ್ಕೆ ನಡುಗಂಬವಾದ ಬಳಿಕ ಅನಂತ ನರ ನಾಗ ಸುರ ಅಸುರ ಮನು ಮುನಿ ಮನೋವಿಷ್ಟಪ್ರದಾಯಕ ಈರೇಳುಲೋಕಾಧಾರ ಮಹಾಮೇರುಶಿಖರಮಂದಿರಮಂಟಪಮಧ್ಯದೊಳೆಸೆವಾ ನವರತ್ನಸಿಂಹಾಸನಾಗ್ರದಮ್ಯಾಲೆ ಆ ನಿರ್ಬಯಲವೇ ಗಟ್ಟಿಗೊಂಡು ಆ ಅಖಂಡಪರಬ್ರಹ್ಮವೇ ವಿನೋದದೊಳಗೊಂದು ವಿನೋದವಾಗಿ ತಾನೇ ರೂಪದೋರಿ, ಪಂಚಮುಖ ದಶಭುಜ ತ್ರಿಪಂಚನೇತ್ರ ವಿಷಕಂಠ ಗಂಗೋತ್ತುಮಾಂಗ ಚಂದ್ರಮೌಳಿ ಅಹಿಕುಂಡಲಿ ಗಜಚರ್ಮಾಂಬರ ಅರ್ಧನಾರೀಶ ವ್ಯಾಘ್ರಾಜಿನುಡಿಗೆ ಹರಿನಯನಾಂಕಿತ ಪಾದಪಂಕಜ ಶ್ರೀಮನ್‍ಮಹಾದೇವ ಮೂರ್ತಿಗೊಂಡಿರಲು ಅಲ್ಲಿ ಹರಿ ಅಜ ಇಂದ್ರಾದ್ಯಷ್ಟ ದಿಕ್ಪಾಲಕರು ಅಷ್ಟವಸುಗಳು ಹದಿನಾಲ್ಕು ಮನುಗಳು ಎಂಬತ್ತೆಂಟುಕೋಟಿ ಮುನಿಗಳು ಮುನ್ನೂರಾಮೂವತ್ತಾರು ಕೋಟಿ ದೇವತೆಗಳು ಕಿನ್ನರರು ಕಿಂಪುರುಷರು ಗರುಡರು ಗಂಧರ್ವರು ಸಿದ್ಧರು ಸಾಧ್ಯರು ಸಾಧಕರು ಅಪ್ಸರೆಯರು ನಾಗದೇವತೆಗಳು ಮೊದಲಾದ ಅನಂತ ದೇವತೆಗಳು, ಮತ್ತೆ ವೀರೇಶ ನಂದೀಶ ಭೃಂಗೀಶ ವಿಘ್ನೇಶ ಕಾಲಭೈರವ ಮಹಾಕಾಯ ಗಜಕರ್ಣ ಘಂಟಾಕರ್ಣ ಶಂಖಕರ್ಣಾದಿ ವ್ಯಾಘ್ರಮುಖ ಸಿಂಹಮುಖ ವಾಮಮುಖ ಗಜಮುಖಾದಿಯಾದ ಅನಂತ ಮುಖದವರು, ಏಕಾಕ್ಷ ದ್ವಿಯಕ್ಷ, ತ್ರಿಯಕ್ಷ ಶತಾಕ್ಷ ಸಹಸ್ರಾಕ್ಷ ಅನಂತಾಕ್ಷರರು, ಏಕಜಿಹ್ವೆ ದ್ವಿಜಿಹ್ವೆ ತ್ರಿಜಿಹ್ವೆ ಶತಜಿಹ್ವೆ ಸಹಸ್ರಜಿಹ್ವೆ ಮೊದಲಾದ ಅನಂತ ಜಿಹ್ವೆಗಳು, ಏಕ ದ್ವಿತೀಯ ಪಂಚ ಶತ ಸಹಸ್ರನಾಸಿಕ ಮೊದಲಾದ ಅನಂತ ನಾಸಿಕರು, ಇದರಂತೆ ಅನಂತಪಾದ ಅನಂತಬಾಹು ಅನಂತಶಿರ ಮೊದಲಾದ ಗಂಗೆಯ ಮೇಲ್ಗಣಿತಕ್ಕೆ ಮೀರಿದ ಪ್ರಮಥಗಣ ರುದ್ರಗಣ ಅಮರಗಣ ಮಹಾಗಣಂಗಳು, ಓಲೈಸಿ ಮೆರೆಯುವ ವೇದಾಗಮ ಪುರಾಣಶಾಸ್ತ್ರ ಉಪನಿಷತ್ತು ಬಲ್ಲ ಪಾಂಡಿತ್ಯರು ವೇದಾಧ್ಯಯನರು ನವರಸವ ಬಲ್ಲ ಕವಿಗಳು ಗಮಕಿ ವಾದಿ ವಾಗ್ಮಿಗಳು, ರಾಗವಿಶಾರದರಾದ ನಾರದ ತುಂಬುರ ಕಂಬಲ ಅಶ್ವತ್ಥರು, ಪಾಠಕ ಪರಿಹಾಸಕರ ಬಹುನಾಟ್ಯದಿಂ ಭೇರಿ ಮೃದಂಗ ಮೊದಲಾದ ಅನಂತ ನಾದಘೋಷ ಅನಂತ ಮಾಂಗಲ್ಯೋತ್ಸವದಿಂದ ಓಲಗವ ಕೈಕೊಂಡು ಅನಂತ ಸೌಖ್ಯದಲಿ ಪರಮಾತ್ಮನೆನಿಸಿ ಮೆರೆಯುವಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.