Index   ವಚನ - 40    Search  
 
ಅಂತಾದ ಕೈಲಾಸ ಮಹಾಮೂರ್ತಿಪರಮಾತ್ಮನು ತನ್ನ ವಕ್ಷ ಭಸ್ಮೋದ್ಭವ ರೇಣುರೂಪೆನಿಸಿದ ರೇಣುಕಾಖ್ಯ ತಾನಾಗಿ ಲೋಕಪಾವನಾರ್ಥವಾದ ನಾರದಮುನಿ ವಿನಂತಿಗೆ ಭೂವನಿತೆಯ ಭ್ರೂಮಧ್ಯ ಮಹಾಲಿಂಗವಾದ ಕೊಲ್ಲೀಪಾಕಿ ಸೋಮೇಶ್ವರನೊಳುದ್ಭವಿಸಿ, ಅರಿಯದೇಳುನೂರುವರ್ಷ ಸರ್ವೇಂದ್ರಿಯಗಳ ಶಿಕ್ಷಿಸಿ, ನಿಜತತ್ತ್ವ ತಿಳಿಯುವುದಕ್ಕೆ ತನ್ನ ಬಯಸುವರ್ಗೆ ತತ್ವೋಪದೇಶವ ಕೈಗೊಳಿಸಿ, ಸರ್ವತೀರ್ಥ ಸರ್ವದೇಶವ ನೋಡುವುದಕ್ಕೆ ಖೇಚರಿಯ ಗಮನದಲ್ಲಿ ನೋಡುತ್ತ ಸಂಚರಿಸುತಿರ್ದು ಮತ್ತೇಳ್ನೂರುವರ್ಷ ಲೋಕೋಪಕಾರವಾಗಿ ಸರ್ವಜನ ಅಭೀಷ್ಠೆಯನು ಮುನ್ನೂರು ರಾಜಕುಮಾರಿಯರ ಮದುವೆಯಾಗಿ, ಪೊಡವಿಡಿ ರುದ್ರಮುನಿಸ್ವಾಮಿಗಳ ಪಡೆದು, ಷಡ್ವಿಧಾಚಾರ್ಯರೊಳಗೆ ಪಂಚಾಚಾರ್ಯರಂ ಪ್ರತಿಷ್ಠಿಸಿ, ಪಂಚಬಗೆಯ ನಾಮವಿಟ್ಟು ಪಂಚಸಿಂಹಾಸನಕ್ಕೆ ಕರ್ತವ್ಯಮಾಡಿ ಘನಲಿಂಗ, ಅತೀತ, ಪಟ್ಟ, ಪರದೇಶಿ, ಮಹಾಂತ, ನಿರಂಜನನೆಂಬ ಆರರೊಳಗೆ ಐದು ಇದಿರಿಟ್ಟು, ರುದ್ರಮುನಿಸ್ವಾಮಿಗಳ ಪಾದದಲ್ಲಿ ಹಲವು ಶಿಷ್ಯರ ಪಡೆಸಿ, ಮಂತ್ರೋಪದೇಶವ ಕೊಡಿಸಿ, ಭುವನಜನ ಶಿಕ್ಷ ದೀಕ್ಷೋಪದೇಶಕ್ಕೆ ಕರ್ತೃತ್ವ ಕೈಗೂಡಿಸಿ, ದೇಶ ದೇಶದಲ್ಲಿ ನೆಲೆಗೊಳಿಸಿ ಸರ್ವಭೋಗ ಬಂಧ ಸುಖ ತನ್ನ ಪುತ್ರಂಗೆ ಇತ್ತು, ಪೊಡವಿಡಿ ರುದ್ರಮುನಿಸ್ವಾಮಿಯೆಂಬ ನಾಮ ಗುರ್ತಿಟ್ಟು ಬಹುನಾಮವನಂಗೀಕರಿಸಿ ಈ ಭುವನದಲ್ಲಿ ಮೆರೆಯುವಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.