ಈ ಪೊಡವಿಯ ಮಡದಿಯ ನಡುನಯನದ ಬೆಡಗಿನ
ಬೆಳಗಿನೊಳೆಸೆವಾ ಬಾಳೇಹಳ್ಳಿ ಸಿಂಹಾಸನಾಧೀಶ
ಪೊಡವಿಡಿ ರುದ್ರಮುನಿಸ್ವಾಮಿಗಳ ಕರಕಂಚೋದ್ಭವರಾದ
ಚಿಕ್ಕರೇವಣಸಿದ್ಧಸ್ವಾಮಿಗಳು ಎನಿಸಿದರು.
ಆ ಚಿಕ್ಕ ರೇವಣಸಿದ್ಧಸ್ವಾಮಿಗಳ ಶಿಷ್ಯ ಗುರುನಂಜಸ್ವಾಮಿ,
ಆ ಗುರುನಂಜಸ್ವಾಮಿಗಳ ಶಿಷ್ಯ ರಾಚೋಟಿಸ್ವಾಮಿ,
ಆ ರಾಚೋಟಿಸ್ವಾಮಿಗಳ ಶಿಷ್ಯ ನಿಡುಮಾಮಿಡಿ ಕರಿಬಸವಸ್ವಾಮಿ,
ಆ ಕರಿಬಸವಸ್ವಾಮಿಗಳ ಶಿಷ್ಯ ಮಲಘಣ ಶಾಂತಸ್ವಾಮಿಗಳು,
ಆ ಮಲಘಣದ ಶಾಂತಸ್ವಾಮಿಗಳ ಶಿಷ್ಯ ಜಡೆಶಾಂತಸ್ವಾಮಿಗಳು
ಆ ಜಡೆಶಾಂತಸ್ವಾಮಿಗಳ ಶಿಷ್ಯ ಮಹಾಂತಸ್ವಾಮಿಗಳು,
ಆತನ ಶಿಷ್ಯ ಮಡಿವಾಳಸ್ವಾಮಿ,
ಆತನ ಶಿಷ್ಯ ರಾಚೋಟಿಸ್ವಾಮಿಗಳು,
ಆತನ ಶಿಷ್ಯ ಮಹಾಂತಸ್ವಾಮಿ,
ಆತನ ಶಿಷ್ಯ ಅತೀತವ ಕೈಕೊಂಡು ಸರ್ವಕ್ಕೆ ಅತೀತನಾದ
ಚಿಣಮಗೇರಿ ಚೌಡಾಪೂರ ನಡುಸೀಮಿ
ಗುಡ್ಡದ ಯೋಗಿಯೆನಿಸಿದ ಮಹಾಂತಸ್ವಾಮಿಗಳು,
ಆತನ ಶಿಷ್ಯ ಮಡಿವಾಳಸ್ವಾಮಿ,
ಆತನ ಶಿಷ್ಯ ಮರಿಸ್ವಾಮಿಗಳು,
ಆತನ ಶಿಷ್ಯ ಗುರುಬಸವದೇವರು.
ಆ ಗುರು ಬಸವದೇವರ ಕನ್ನೆ ಶಿಷ್ಯ
ಬಿದನೂರ ಮಡಿವಾಳಾಖ್ಯನು.
ಆ ಮಡಿವಾಳಾಖ್ಯನೆಂಬ ನಾಮವಿಡಿದು
ನಿರ್ನಾಮಲೀಲಾ ನಟಿಸಬೇಕೆಂಬ
ಅರವಿನೊಳಗೆ ಮರವಾಗಿರ್ದಿಯಲ್ಲಾ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.