Index   ವಚನ - 42    Search  
 
ಹಲವು ಲೀಲೆಯೊಳಗೆ ಗುರುಶಿಷ್ಯ ಎರಡಾದ ವಿನೋದವೇನೆಂಬೆ? ಎನ್ನ ಶ್ರೀಗುರು ಬಸವೇಶ್ವರನು ಎನ್ನ ಶಿಕ್ಷಿಸಿ ದೀಕ್ಷೆಯನೆಸಗಿ ಮೋಕ್ಷದಖಣಿಯಮೂರ್ತಿಯತಂದು, ತನ್ನ ಗುರು ತನ್ನ ಗುರ್ತವ ತೋರಿದಾ. ಆ ಗುರ್ತವ ಎನ್ನ ಕೈಯಲ್ಲಿಟ್ಟು ಈ ಮಹಾಂತನ ಪೂಜಿಸಿ ಮುಕ್ತಿಯ ಪಡಿಯೆಂದು ನಿರೂಪಿಸಲು, ಆ ಗುರುನಿರೂಪವ ಕೈಕೊಂಡು ಮಹಾಂತನ ಮುಂದಿಟ್ಟುಕೊಂಡು ಈ ಮಹಾಂತ ಎನ್ನ ಗುರುವಿನಗುರು ಎನಗೆ ಪರಮಾರಾಧ್ಯ ತಾ ಲಿಂಗವಾಗಿ ಬಂದಕಾರಣವೇನೆಂದು ತನ್ನೊಳಗೆ ತಾನೆ ವಿಚಾರಿಸಲು, ಅಲ್ಲಿ ಹೊಳೆದುದು ನೀನು ನನಗೆ ಪರಮಾರಾಧ್ಯ, ಒಂದೇ ಲಿಂಗವೇ ಹಲವರಾಗಿ ತೋರಿದಿರಿ. ಅದೆಂತೆಂದಡೆ: ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿಯಮಂತ್ರ ಮತ್ತು ಶಿಕ್ಷಾಗುರು ದೀಕ್ಷಾಗುರು ಮೋಕ್ಷಾಗುರು ಗುರುವಿನಗುರು ಪರಮಗುರು ಪರಮಾರಾಧ್ಯ ಮಹಾಂತದೇವರ ದೇವ ನೀನೇ ಆದಿ. ನೀವು ಹೀಂಗಾದ ಪರಿಯೆಂತೆಂದಡೆ: ಮೊದಲೇ ಶಿಕ್ಷಾಗುರು ಶಿಖಾಮಣಿಸ್ವಾಮಿಯೆನಿಸಿದಿರಿ, ದೀಕ್ಷಾಗುರು ಗುರುಬಸವಸ್ವಾಮಿಯೆನಿಸಿದಿರಿ, ಮೋಕ್ಷಾಗುರು ಶ್ರೀಮನ್‍ಮಹಾಮುರಘೆಯಸ್ವಾಮಿಗಳ ಚರಮೂರ್ತಿ ಸಿರಿವಾಸ ಚನ್ನಬಸವೇಶ್ವರರೆನಿಸಿದಿರಿ. ಗುರುವಿನಗುರು ಹಳಪ್ಯಾಟಿ ಬಸವಯ್ಯನೆನಿಸಿದಿರಿ. ಪರಮಗುರು ಭಂಗೀಪರ್ವತದೇವರೆನಿಸಿದಿರಿ. ಪರಮಾರಾಧ್ಯ ಗೊಬ್ಬೂರ ಸದಾಶಿವದೇವರೆನಿಸಿದಿರಿ. ಸರ್ವದೇವರು ಮಹೇಶ್ವರರು ಎನಗೆ ಮಹಾಮಹಾಂತನೆನಿಸಿದಿರಿ. ಎನ್ನ ದೇವರದೇವ ಸರ್ವವು ನೀನೇ ಆಗಿರ್ದು, ನೀನು ಒಂದೇ ಪರಮಾರಾಧ್ಯರೆನಲುಂಟೆ? ಒಂದೇ ನೀ ಎನಗೆ ಲಿಂಗವಾದನೆನಲುಂಟೆ? ಲಿಂಗವಾದಾತನು ನೀನೆ, ಪರಮಾರಾಧ್ಯನಾದಾತನು ನೀನೆ, ಗುರುವಾದಾತನು ನೀನೆ, ಅರುವಾದಾತನು ನೀನೆ, ನೀನಲ್ಲದೆ ಮತ್ತೊಂದು ಬ್ಯಾರೆ ಭಾವಿಸಲುಂಟೆ? ಎನ್ನ ಹುಟ್ಟಿಸಿದ ಮಹಾಂತನು ನೀನೆ, ಎನ್ನ ಬೆಳಸಿದ ಶರಣಬಸವಪ್ಪನು ನೀನೆ ಎನ್ನ ಮನ್ನಿಸಿದ ಘನಸಿದ್ದಪ್ಪನು ನೀನೆ, ಎನ್ನ ನಿಂದಿಸಿದ ಹಳಪ್ಯಾಟಿ ಬಸಯ್ಯನು ನೀನೆ, ಉಣಿಸುವ ಉಡಿಸುವ ಹಾಸುವ ಹೊಚ್ಚುವ ಮುಚ್ಚುವ ಚುಚ್ಚುವ ಹಳಿವ ಮುಳಿವ ಸರ್ವವೂ ಎನಗೆ ನೀನಲ್ಲದೆ ಮತ್ತೊಬ್ಬರಿಲ್ಲ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.