Index   ವಚನ - 68    Search  
 
ಆ ಪರಶಿವನ ನಿರ್ಬಯಲವೇ ಮಹಾಬಯಲು, ಚಿದ್ಬಯಲು, ಬಯಲು ಮೂರಾದರೂ ಒಂದೇ. ಚಿನ್ನಾದ ಚಿದ್ಬಿಂದು ಚಿತ್ಕಳೆ, ನಾದ, ಬಿಂದು, ಕಳೆ ಆರಾದರೂ ಒಂದೇ. ಆರು ಮೂರು ಒಂಬತ್ತಾದರೂ ಒಂದೇ. ಒಂದು ಒಂಬತ್ತಾಗಿ, ಆ ನಿರ್ಬಯಲು ತಾನೆ ಹಲವಾಗಿತ್ತು. ಈ ಹಲವಾದರೂ ನಿರ್ಬೈಲೊಂದೇ, ಒಂದೇ ಎಂದರೆ ಒಂದೂ ಇಲ್ಲಾ. ನಿರ್ಬೈಲಿಗೆ ನಾಮ ಉಂಟೇ? ರೂಪ ಉಂಟೇ? ಕ್ರೀಯ ಉಂಟೇ? ನಿರ್ಬೈಲೇ ನಿರ್ಬೈಲೆಂಬುದು ಇದು ಎಲ್ಲಿ ಇದೇ ನಿರ್ಬೈಲು. ಮತ್ತೆ ತಾ ನಿರ್ಬೈಲ ರೂಪಾದರೂ, ಆ ರೂಪ ತಾ ನಿರ್ಬೈಲಲ್ಲವೇ? ತಾ ಕೂಡಲಿಕ್ಕೆ ಠಾವು ಬ್ಯಾರುಂಟೇ? ಗಂಧ ರುಚಿ ರೂಪ ಸ್ಪರ್ಶ ಶಬ್ದ ತೃಪ್ತಿ ಇವು ತನ್ನ ತಾನಲ್ಲವೇ? ಇದ್ದದ್ದು ತಾನೇ ಇಲ್ಲದ್ದು ತಾನೇ, ಹ್ಯಾಂಗಾದರೂ ತಾನೇ ನಿರ್ಬೈಲು. ಇದನರಿಯದೇ ಪೂರ್ವಪುಣ್ಯದಿಂದೆ ಮಾನವ ಜನ್ಮವ ತಾಳಿ, ಅಜ್ಞಾನವಳಿದು ಸುಜ್ಞಾನಿಯಾಗಿ, ಸುಜ್ಞಾನದಿಂದ ಸಾಧುರ ಸಂಗವ ಮಾಡಿ, ಗುರುಕರುಣವ ಪಡೆದು ಲಿಂಗವ ಪೂಜಿಸಿ, ಜಂಗಮಾರಾಧನೆಯ ಮಾಡಿ, ಪಾದೋದಕ ಸಲ್ಲಿಸಿ, ಪ್ರಸಾದವನುಂಡು, ವಿಭೂತಿಯ ಧರಿಸಿ, ರುದ್ರಾಕ್ಷಿಯ ಶೃಂಗರಿಸಿ, ಮಂತ್ರವನೋದಿ, ಯಂತ್ರವ ಕಟ್ಟಿ, ತಂತ್ರವ ತಿಳಿದು, ಸ್ವತಂತ್ರಸಿದ್ಧಲಿಂಗನಾದ ಮೇಲೆ ತನ್ನೊಳಗೆ ತಾನೇ ವಿಚಾರಿಸಿ, ಮತ ಒಂದಾದ ಮತಿಜ್ಞಾನ, ಸ್ತುತಿ ನಿಂದ್ಯ ಒಂದಾದ ತತ್ವಜ್ಞಾನ, ಸರ್ವವೂ ಒಂದಾದ ಸಮ್ಯಜ್ಞಾನ, ಅಂಗ ಒಂದಾದ ತತ್ವಜ್ಞಾನ, ಆ ಪ್ರಾಣ ಒಂದಾದ ಆತ್ಮಜ್ಞಾನ, ಕತ್ತಲೆ ಬೆಳಗು ಒಂದಾದ ಮಹಾಜ್ಞಾನ, ನಿಸ್ಸೀಮವಾದ ಅಖಂಡಜ್ಞಾನ, ಶಬ್ದಮುಗ್ಧವಾದುದ್ದೇ ಸ್ವಯಂಭುಬ್ರಹ್ಮಜ್ಞಾನ, ಅರವಾದದ್ದು ಅರವು, ಮರವಾದದ್ದು ಮರವು. ಈ ಮರವಾದದ್ದು ಮರವಾಗದೆ ಮರವು ಮರಳಿ ಅರವಾಗಿ, ಎಚ್ಚರಗೊಂಡು ಇಚ್ಛೆ ಉಳಿದರೆ ಅದೇ ಭವಮರವು, ಮರವಾಗಿ ಮರವು ಮರವಾದರೆ, ಸಾವಿಗೆ ಸಾವಾಗಿ ಸಾವು ಸತ್ತಿತ್ತು. ಮರವಿನ ಮರವೇ ಸಾವಿನ ಸಾವು; ಸಾವೆಂಬುದೇ ಮಾಯೆ. ಮಾಯೆಯೆಂಬುದೇ ಮರಗಿ, ಮರಗಿಯೆಂಬುದೇ ದುರಗಿ, ದುರಗಿಯೆಂಬುದೇ ಶಕ್ತಿ, ಶಕ್ತಿಯೆಂಬುದೇ ಅಂಗ, ಅಂಗವೆಂಬುದೇ ಲಿಂಗ, ಲಿಂಗವೆಂಬುದೇ ಮನ, ಮನವೆಂಬುದೇ ಘನ, ಘನವೆಂಬುದೇ ಗುರು, ಗುರುವೆಂಬುದೇ ಪರ, ಪರವೆಂಬುದೇ ತಾನು, ತಾನುಯೆಂಬುದೇ ಬೈಲು, ಬೈಲೆಂಬುದೇ ಮುಕ್ತಿ, ಮುಕ್ತಿಯೆಂಬುದೇ ಏನೋ ಏನೋ ಎಂಬುದೇ ಮಾತು, ಮಾತುಯೆಂಬುದೇ ವಚನ, ವಚನಯೆಂಬುದೇ ಅಕ್ಷರ, ಅಕ್ಷರಯೆಂಬುದೇ ಮಂತ್ರ, ಮಂತ್ರಯೆಂಬುದೇ ಪ್ರಣವ, ಪ್ರಣವಯೆಂಬುದೇ ನಾದ, ನಾದಯೆಂಬುದೇನಾದುದೇ ಹೇಳಲಿಕ್ಕೆ ನಿರ್ಬೈಲು. ನಿರ್ಬೈಲೇ ಸುಳ್ಳು, ಈ ಸುಳ್ಳು ಖರೇ ಮಾಡದೆ ಹರಿ ಅಜ ಇಂದ್ರಾದಿ ಮನು ಮುನಿ ನರ ನಾಗ ಸುರ ಸಿದ್ಧ ಸಾಧ್ಯರು, ರುದ್ರ ಈಶ್ವರ ಸದಾಶಿವ ಮಹಾದೇವರು ಮತ್ತೆ ಮಾದೇವರು, ಅಷ್ಟಾಂಗಯೋಗಿಗಳು, ಅಷ್ಟಾವರಣ ನಿಷ್ಠೆಯುಳ್ಳವರು, ಮಹಾನುಭಾವಿಗಳು, ನಿಜಜ್ಞಾನಿಗಳು, ಮಹಾ ಅರವಿಗಳು, ಸುಳ್ಳು ಸುಳ್ಳು ಮಾಡಿ, ಸುಳ್ಳು ಬ್ಯಾರೆ, ಖರೆಬ್ಯಾರೆ, ಬ್ರಹ್ಮವು ಬ್ಯಾರೆ, ಹಮ್ಮು ಬ್ಯಾರೆ, ಬ್ರಹ್ಮಾಂಡ ಬ್ಯಾರೆ, ಪಿಂಡಾಂಡ ಬ್ಯಾರೆ, ಕಾಯ ಬ್ಯಾರೆ, ಕರಣ ಬ್ಯಾರೆ, ಆತ್ಮ ಬ್ಯಾರೆ, ಪರಮಾತ್ಮ ಬ್ಯಾರೆ, ಭವ ಬ್ಯಾರೆ, ಶಿವ ಬ್ಯಾರೆ, ಬೆಳಗು ಬ್ಯಾರೆ, ಕತ್ತಲು ಬ್ಯಾರೆ, ಪುಣ್ಯ ಬ್ಯಾರೆ, ಪಾಪ ಬ್ಯಾರೆ, ಸತ್ಕರ್ಮ ಬ್ಯಾರೆ, ದುಷ್ಕರ್ಮ ಬ್ಯಾರೆ, ಅಜ್ಞಾನ ಬ್ಯಾರೆ, ಸುಜ್ಞಾನ ಬ್ಯಾರೆ, ಹೆಣ್ಣು ಬ್ಯಾರೆ, ಗಂಡು ಬ್ಯಾರೆ, ಸ್ವರ್ಗ ಬ್ಯಾರೆ, ನರಕ ಬ್ಯಾರೆ, ಸಾವು ಬ್ಯಾರೆ, ಜೀವ ಬ್ಯಾರೆ, ಗುರು ಬ್ಯಾರೆ, ಶಿಷ್ಯ ಬ್ಯಾರೆ, ಮಹಾಂತ ಬ್ಯಾರೆ, ಮಡಿವಾಳ ಬ್ಯಾರೆ, ಮೃತ್ಯು ಬ್ಯಾರೆ, ಮಾತು ಬ್ಯಾರೆ, ಭಕ್ತಿ ಬ್ಯಾರೆ, ಮುಕ್ತಿ ಬ್ಯಾರೆ, ನಾವು ಬ್ಯಾರೆ, ನೀವು ಬ್ಯಾರೆ, ತಾ ಬ್ಯಾರೆ ಬ್ಯಾರೆಯೆಂದು ತಾ ಬ್ಯಾರ್ಯಾಗಿ ಸುಳ್ಳು ಖರೇ ಮಾಡದ, ತುಪ್ಪ ಹಾಲುವ ಮಾಡದೇ ಹಾಲು ತುಪ್ಪವ ಮಾಡಿದಂತೆ ತಾವು ಸುಳ್ಳಾಗದೆ ಸುಳ್ಳು ಸುಳ್ಳೆಂದು ಸುಳ್ಳು ಜೊಳ್ಳಾದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.