Index   ವಚನ - 69    Search  
 
ತಾರಕಾಕೃತಿಯ ನಕಾರಪ್ರಣವದ ಆಧಾರಚಕ್ರದೊಳು ಕೆಂಪುಬಣ್ಣವಿರ್ಪುದು. ದಂಡಕಾಕೃತಿಯ ಮಕಾರಪ್ರಣವದ ಸ್ವಾದಿಷ್ಠಾನಚಕ್ರದೊಳು ನೀಲವರ್ಣವಿರ್ಪುದು. ಕುಂಡಲಾಕೃತಿಯ ಶಿಕಾರಪ್ರಣವದ ಮಣಿಪೂರಚಕ್ರದೊಳು ಕುಂಕುಮವರ್ಣವಿರ್ಪುದು. ಅರ್ಧಚಂದ್ರಾಕೃತಿಯ ಯಕಾರಪ್ರಣವದ ಅನಾಹತಚಕ್ರದೊಳು ಪೀತವರ್ಣವಿರ್ಪುದು. ದರ್ಪಣಾಕೃತಿಯ ಯಕಾರಪ್ರಣವದ ವಿಶುದ್ಧಿಚಕ್ರದೊಳು ಶ್ವೇತವರ್ಣವಿರ್ಪುದು. ಜ್ಯೋತಿರಾಕೃತಿಯ ಓಂಕಾರಪ್ರಣವದ ಆಜ್ಞಾಚಕ್ರದೊಳು ಮಾಣಿಕ್ಯವರ್ಣವಿರ್ಪುದು. ಮತ್ತಂ, ಪೃಥ್ವಿತತ್ವಯುಕ್ತನಾದ ಸದ್ಭಕ್ತನೆಂಬ ಅಂಗನ ಸುಚಿತ್ತಹಸ್ತದೊಳು ಆಚಾರಲಿಂಗವಿರ್ಪುದು. ಅಪ್ಪು ತತ್ವಯುಕ್ತವಾದ ಮಹೇಶನೆಂಬ ಅಂಗನ ಸುಬುದ್ಧಿಹಸ್ತದೊಳು ಗುರುಲಿಂಗವಿರ್ಪುದು. ತೇಜತತ್ವಯುಕ್ತನಾದ ಪ್ರಸಾದಿಯೆಂಬ ಅಂಗನ ನಿರಹಂಕಾರಹಸ್ತದೊಳು ಶಿವಲಿಂಗವಿರ್ಪುದು. ವಾಯುತತ್ವಯುಕ್ತನಾದ ಪ್ರಾಣಲಿಂಗಿಯೆಂಬ ಅಂಗನ ಸೂರ್ಯಹಸ್ತದೊಳು ಜಂಗಮಲಿಂಗವಿರ್ಪುದು. ಆಕಾಶತತ್ವಯುಕ್ತನಾದ ಶರಣನೆಂಬ ಅಂಗನ ಸುಜ್ಞಾನಹಸ್ತದೊಳು ಪ್ರಸಾದಲಿಂಗವಿರ್ಪುದು. ಆತ್ಮತತ್ವಯುಕ್ತನಾದ ಐಕ್ಯನೆಂಬ ಅಂಗನ ಸದ್ಭಾವಹಸ್ತದೊಳು ಮಹಾಲಿಂಗವಿರ್ಪುದು. ಮತ್ತಂ, ಘ್ರಾಣವೆಂಬಮುಖದ ಕ್ರಿಯಾಶಕ್ತಿಯ ಶ್ರದ್ಧಾಭಕ್ತಿಯೊಳು ಸುಗಂಧಪದಾರ್ಥವಿರ್ಪುದು. ಜಿಹ್ವೆಯೆಂಬಮುಖದ ಜ್ಞಾನಶಕ್ತಿಯ ನೈಷ್ಠಿಕಾಭಕ್ತಿಯೊಳು ಸುರಸಪದಾರ್ಥವಿರ್ಪುದು. ನೇತ್ರವೆಂಬಮುಖದ ಇಚ್ಛಾಶಕ್ತಿಯ ಸಾವಧಾನಭಕ್ತಿಯೊಳು ಸಾರೂಪಪದಾರ್ಥವಿರ್ಪುದು. ತ್ವಗೇಂದ್ರಿಯೆಂಬಮುಖದ ಆದಿಶಕ್ತಿಯ ಅನುಭಾವಭಕ್ತಿಯೊಳು ಸುಸ್ವರೂಪಪದಾರ್ಥವಿರ್ಪುದು. ಶ್ರೋತ್ರೇಂದ್ರಿಯಮುಖದ ಪರಶಕ್ತಿಯ ಆನಂದವೆಂಬಭಕ್ತಿಯೊಳು ಸುಶಬ್ದಪದಾರ್ಥವಿರ್ಪುದು. ಹೃದಯೇಂದ್ರಿಯಮುಖದ ಚಿತ್‍ಶಕ್ತಿಯ ಸಮರಸಭಕ್ತಿಯೊಳು ಸುತೃಪ್ತಿಯಿರ್ಪುದು. ಇಂತೀ ಎಪ್ಪತ್ತೆರಡುಮುಖದಿ ನಿನ್ನ ಪೂಜಿಸಿ, ನಿನ್ನ ಹಾಡ್ಯಾಡಿ, ನಿನ್ನ ಧ್ಯಾನಿಸಿ, ನಿನ್ನ ಚಿಂತಿಸಿ, ನಿನ್ನೊಳು ಕೂಡುತ, ನೀನಾರೆಂದು ಹವಣಿಸಿ ಅಂತರಂಗದಿ ಪೊಕ್ಕು ನೋಡೆ ನೀನಲ್ಲದೆ ನಾನೇ ಆದ ಪರಿ ಇದೇನು ಚೋದ್ಯವೊ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ?